ನವದೆಹಲಿ:ದೇಶದಮಾಜಿ ಅಟಾರ್ನಿ ಜನರಲ್ ಹಾಗು ಹಿರಿಯ ಕಾನೂನು ತಜ್ಞ ಸೋಲಿ ಜೆ. ಸೊರಾಬ್ಜಿ ಕೊರೊನಾ ಸೋಂಕು ತಗುಲಿ ತಮ್ಮ 91ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
1930ರಲ್ಲಿ ಜನಿಸಿದ ಸೊರಾಬ್ಜಿ 1953 ರಲ್ಲಿ ಬಾಂಬೆ ಹೈಕೋರ್ಟ್‌ನಲ್ಲಿ ತಮ್ಮ ಕಾನೂನು ಅಭ್ಯಾಸವನ್ನು ಪ್ರಾರಂಭಿಸಿದ್ದರು. ಅವರನ್ನು ಸುಪ್ರೀಂಕೋರ್ಟ್‌ನ ಹಿರಿಯ ವಕೀಲರನ್ನಾಗಿ 1971 ರಲ್ಲಿ ಬಾಂಬೆ ಹೈಕೋರ್ಟ್ ನೇಮಿಸಿತ್ತು.
ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳ ಸಂರಕ್ಷಣೆಗಾಗಿ ಮಾಡಿರುವ ಸೇವೆಯ ಹಿನ್ನೆಲೆಯಲ್ಲಿ ಸೊರಾಬ್ಜಿಗೆ 2002 ರಲ್ಲಿ ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ 'ಪದ್ಮವಿಭೂಷಣ' ನೀಡಿ ಗೌರವಿಸಲಾಗಿತ್ತು. ಅವರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದರು.
ಸೊರಾಬ್ಜಿ ಸುಮಾರು ಏಳು ದಶಕಗಳ ಕಾಲ ಕಾನೂನು ವೃತ್ತಿಯಲ್ಲಿದ್ದು, ಎರಡು ಬಾರಿ ಭಾರತದ ಅಟಾರ್ನಿ ಜನರಲ್ ಆಗಿ ಸೇವೆ ಸಲ್ಲಿಸಿದ್ದರು. ಮೊದಲ ಬಾರಿ 1989-90 ಮತ್ತು ಎರಡನೆಯ ಬಾರಿ 1998 ರಿಂದ 2004 ರವರೆಗೆ ಮೊದಲ ಎನ್ಡಿಎ ಸರ್ಕಾರದ ಅವಧಿಯಲ್ಲಿ ಎಜಿ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಆಸ್ಟ್ರೇಲಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಆರ್ಡರ್ ಆಫ್ ಆಸ್ಟ್ರೇಲಿಯಾ’ ಗೌರವಕ್ಕೂ ಇವರು ಪಾತ್ರರಾಗಿದ್ದರು.
ಗಣ್ಯರ ಸಂತಾಪ
"ನಾವು ಭಾರತದ ಕಾನೂನು ವ್ಯವಸ್ಥೆಯ ಐಕಾನ್ ಅನ್ನು ಕಳೆದುಕೊಂಡಿದ್ದೇವೆ. ಸಾಂವಿಧಾನಿಕ ಕಾನೂನು ಮತ್ತು ನ್ಯಾಯ ವ್ಯವಸ್ಥೆಯ ವಿಕಾಸವನ್ನು ಆಳವಾಗಿ ಪ್ರಭಾವಿಸಿದ ಆಯ್ದ ಕೆಲವರಲ್ಲಿ ಅವರೂ ಒಬ್ಬರು. ಪದ್ಮವಿಭೂಷಣ ಪ್ರಶಸ್ತಿ ಪಡೆದ ಅವರು ಅತ್ಯಂತ ಶ್ರೇಷ್ಠ ನ್ಯಾಯಶಾಸ್ತ್ರಜ್ಞರಲ್ಲಿ ಒಬ್ಬರಾಗಿದ್ದರು" ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಂತಾಪ ಸೂಚಿಸಿದ್ದಾರೆ.
ಸೋಲಿ ಜೆ. ಸೊರಾಬ್ಜಿ ಅವರ ನಿಧನದ ಕುರಿತು, ಸಿಜೆಐ ನ್ಯಾ. ಎನ್.ವಿ.ರಮಣ, " ಸೊರಾಬ್ಜಿ ಅವರು ಭಾರತದ ಅಟಾರ್ನಿ ಜನರಲ್ ಕಚೇರಿಯಲ್ಲಿ ಎರಡು ಬಾರಿ ಸೇವೆ ಸಲ್ಲಿಸಿದ್ದಾರೆ. ಅವರ ಮಾನವೀಯ ಮತ್ತು ಸಹಾನುಭೂತಿಯ ವಿಧಾನವು ಅವರ ಕಾನೂನು ಕಾರ್ಯವನ್ನು ವ್ಯಾಖ್ಯಾನಿಸಿದೆ. ಮೂಲಭೂತ ಹಕ್ಕುಗಳು ಮತ್ತು ಮಾನವ ಹಕ್ಕುಗಳನ್ನು ರಕ್ಷಿಸುವಲ್ಲಿ ಸುಮಾರು ಏಳು ದಶಕಗಳಲ್ಲಿ ಹರಡಿರುವ ಅವರ ಕಾರ್ಯವು ಅಂತಾರಾಷ್ಟ್ರೀಯ ಖ್ಯಾತಿಯಾಗಿದೆ. ಪ್ರಜಾಪ್ರಭುತ್ವದ ಆಧಾರಸ್ತಂಭಗಳಿಗೆ ಬಲವನ್ನು ನೀಡಿದ ದಂತಕಥೆಯೆಂದು ಅವರನ್ನು ಸ್ಮರಿಸಲಾಗುವುದು. ಅಗಲಿದ ಆತ್ಮಕ್ಕೆ ನನ್ನ ಗೌರವವನ್ನು ಸಲ್ಲಿಸುತ್ತೇನೆ." ಎಂದು ಹೇಳಿದರು.
"ಸೊರಾಬ್ಜಿ ಅತ್ಯುತ್ತಮ ವಕೀಲ ಮತ್ತು ಬುದ್ಧಿಜೀವಿ. ಕಾನೂನಿನ ಮೂಲಕ ಅವರು ಬಡವರಿಗೆ ಮತ್ತು ದೀನ ದಲಿತರಿಗೆ ಸಹಾಯ ಮಾಡುವಲ್ಲಿ ಮುಂಚೂಣಿಯಲ್ಲಿದ್ದರು. ಭಾರತದ ಅಟಾರ್ನಿ ಜನರಲ್ ಅವರ ಗಮನಾರ್ಹ ಅವಧಿಗೆ ಅವರನ್ನು ಸ್ಮರಿಸಲಾಗುವುದು. ಅವರ ನಿಧನದಿಂದ ಬೇಸರವಾಯಿತು" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.