ಹೈದರಾಬಾದ್: ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆಗೆ ಒಳಗಾಗಿರುವುದರಿಂದ ಅರಕು ಮಾಜಿ ಸಂಸದೆ ಕೊತಪಲ್ಲಿ ಗೀತಾ ಅವರನ್ನು ಸಿಬಿಐ ಪೊಲೀಸರು ಬಂಧಿಸಿದ್ದಾರೆ.
ಕಂಪನಿಯೊಂದರ ಹೆಸರಿನಲ್ಲಿ 50 ಕೋಟಿ ರೂಪಾಯಿ ಸಾಲ ಪಡೆದು ಮರುಪಾವತಿ ಮಾಡಿಲ್ಲ ಎಂಬ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಸಿಬಿಐ ನ್ಯಾಯಾಲಯ, ಗೀತಾ ಮತ್ತು ಅವರ ಪತಿ ಪಿ. ರಾಮಕೋಟೇಶ್ವರ ರಾವ್ ಅವರಿಗೆ ನ್ಯಾಯಾಲಯ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಇವರೊಂದಿಗೆ ಬ್ಯಾಂಕ್ ಅಧಿಕಾರಿಗಳಾದ ಬಿ. ಕೆ ಜಯಪ್ರಕಾಶ್ ಮತ್ತು ಕೆ. ಕೆ ಅರವಿಂದಾಕ್ಷನ್ ಅವರಿಗೂ ಕೂಡಾ ಐದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
50 ಕೋಟಿ ರೂಪಾಯಿ ಸಾಲ ಪಡೆದು ಮರುಪಾವತಿ ಮಾಡಿಲ್ಲ ಎಂಬ ಬಗ್ಗೆ ಪಿಎನ್‌ಬಿ ನೀಡಿದ ದೂರಿನ ಆಧಾರದ ಮೇಲೆ ಸಿಬಿಐ ಅಧಿಕಾರಿಗಳು ಗೀತಾ ಅವರ ವಿಚಾರಣೆ ನಡೆಸಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿತ್ತು. ಆ ಬಳಿಕ ಸಿಬಿಐ ನ್ಯಾಯಾಲಯದಲ್ಲಿ ವಾದ - ಪ್ರತಿ ವಾದದ ಬಳಿಕ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅವರಿಗೆ ಶಿಕ್ಷೆ ವಿಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. ಬಂಧನದ ನಂತರ ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ಉಸ್ಮಾನಿಯಾ ಆಸ್ಪತ್ರೆಗೆ ಕರೆದೊಯ್ಯಲಾಯಿತು.