ನವದೆಹಲಿ:ಬೆಂಗಳೂರಿನಲ್ಲಿ 26 ಪ್ರತಿಪಕ್ಷಗಳು ಸೇರಿ ನಡೆಸಿದ ಸಭೆಗೆ ಸೆಡ್ಡು ಹೊಡೆದು ದೆಹಲಿಯಲ್ಲಿ 39 ಪಕ್ಷಗಳನ್ನು ಒಟ್ಟುಗೂಡಿಸಿ ಶಕ್ತಿ ಪ್ರದರ್ಶನ ಮಾಡಿದ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮತ ಮೈತ್ರಿಕೂಟ (ಎನ್‌ಡಿಎ), ಪ್ರಧಾನಿ ನರೇಂದ್ರ ಮೋದಿ ಅವರ ಮುಂದಾಳತ್ವದಲ್ಲೇ ಮುಂಬರುವ ಲೋಕಸಭೆ ಚುನಾವಣೆ ಎದುರಿಸುವ ನಿರ್ಣಯ ಪಾಸು ಮಾಡಿದೆ. 2024ರ ಚುನಾವಣೆಯಲ್ಲಿ ಈ ಹಿಂದಿಗಿಂತಲೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿ ಸರ್ಕಾರ ರಚಿಸುವ ಪ್ರಸ್ತಾಪವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.
ದೆಹಲಿಯ ಅಶೋಕ ಹೋಟೆಲ್ನಲ್ಲಿ ಮಂಗಳವಾರ 4 ಗಂಟೆಗಳ ಕಾಲ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ನೇತೃತ್ವದಲ್ಲಿ ಎನ್‌ಡಿಎ ಸಭೆ ನಡೆಸಲಾಯಿತು. ಬಿಜೆಪಿ ತನ್ನ ಹಳೆಯ ಮಿತ್ರರನ್ನು ಮತ್ತೆ ಒಂದೇ ವೇದಿಕೆಗೆ ತಂದು ಬಲಪ್ರದರ್ಶನ ನಡೆಸಿತು.
'ದಿಕ್ಕುದೆಸೆಯಿಲ್ಲದ ಪ್ರತಿಪಕ್ಷಗಳು':ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ವೃಥಾ ಸುಳ್ಳು ಆರೋಪ ಮಾಡುತ್ತಿವೆ. ಇವೆಲ್ಲವೂ ಆಧಾರರಹಿತವಾಗಿವೆ. ದಿಕ್ಕು ದೆಸೆಯಿಲ್ಲದೇ ಪ್ರತಿಪಕ್ಷಗಳು ನಡೆದುಕೊಳ್ಳುತ್ತಿವೆ. ಈ ಎಲ್ಲ ನಡೆಗಳನ್ನು ದೇಶದ ಜನರು ತಿರಸ್ಕರಿಸಲಿದ್ದಾರೆ. ಮೋದಿ ನೇತೃತ್ವದಲ್ಲಿ ಮತ್ತೊಮ್ಮೆ ಸರ್ಕಾರ ರಚನೆ ಮಾಡುವ ಮೂಲಕ ನವಭಾರತ ನಿರ್ಮಾಣದ ಬಗ್ಗೆ ಎನ್‌ಡಿಎ ಒಕ್ಕೂಟ ಅಂಗೀಕರಿಸಿದ ಗೊತ್ತುವಳಿಯಲ್ಲಿದೆ.
ಪ್ರಧಾನಿ ಮೋದಿ, ಜೆ.ಪಿ. ನಡ್ಡಾ ಸೇರಿದಂತೆ ಎನ್‌ಡಿಎ ಅಂಗಪಕ್ಷಗಳ ಅಧ್ಯಕ್ಷರಿಗೆ ಸಭೆಯಲ್ಲಿ ತಮ್ಮ ಅಭಿಪ್ರಾಯ ಮಂಡನೆಗೆ ಅವಕಾಶ ನೀಡಲಾಯಿತು. ಎಲ್ಲರೂ ಸಭೆಯಲ್ಲಿ ಮಂಡಿಸಲಾದ ಗೊತ್ತುವಳಿಯನ್ನು ಸಂಪೂರ್ಣ ಒಪ್ಪಿಕೊಳ್ಳುವುದಾಗಿ ಹೇಳಿದರು. ಇದರ ಜತೆಗೆ ಹಿಂದಿನ ಲೋಕಸಭೆ ಚುನಾವಣೆಗಿಂತ ಹೆಚ್ಚು ಸ್ಥಾನ ಪಡೆದು ಎನ್‌ಡಿಎ ಸರ್ಕಾರ ರಚಿಸುವ ವಿಶ್ವಾಸ ವ್ಯಕ್ತಪಡಿಸಿದರು.