ನವದೆಹಲಿ:ತುರ್ತು ಅಗತ್ಯ ಸೇವೆ, ವಿವಿಐಪಿ, ರಾಜಕಾರಣಿಗಳಿಗೆ ಮಾತ್ರ ಝೀರೋ ಟ್ರಾಫಿಕ್ ಒದಗಿಸಲಾಗುತ್ತದೆ. ಆದರೆ, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ವಿಡಿಯೋ ಮಾತ್ರ ವಿಭಿನ್ನ. ಇಲ್ಲಿ ಹುಲಿಯೊಂದು ರಸ್ತೆ ದಾಟುತ್ತಿದ್ದು, ಇದಕ್ಕಾಗಿ ಅರಣ್ಯಾಧಿಕಾರಿಗಳು ವಾಹನಗಳನ್ನು ತಡೆದು ನಿಲ್ಲಿಸಿದ್ದಾರೆ.
ಈ ವಿದ್ಯಮಾನ ನಡೆದ ಸ್ಥಳದ ಬಗ್ಗೆ ನಿಖರತೆ ಇಲ್ಲ. ಆದರೆ, ವಾಹನಗಳ ಮೇಲಿನ ನಂಬರ್ ಪ್ಲೇಟ್ ಆಧಾರದ ಮೇಲೆ ಇದು ಮಹಾರಾಷ್ಟ್ರದಲ್ಲಿ ನಡೆದಿರಬಹುದು ಎಂದು ಹೇಳಲಾಗುತ್ತಿದೆ. ಇಬ್ಬರು ಅರಣ್ಯಾಧಿಕಾರಿಗಳು ರಸ್ತೆ ಬದಿ ಹುಲಿಯೊಂದನ್ನು ಕಂಡು, ಅದು ದಾಟಲು ಅನುವಾಗುವಂತೆ ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳ ಸಂಚಾರವನ್ನೇ ನಿಲ್ಲಿಸಿದ್ದಾರೆ.
ಹುಲಿ ರಸ್ತೆ ದಾಟುವಾಗ ಜನರು ಕಿರುಚಾಡಲು ಮುಂದಾದಾಗ ಗದರಿದ ಅಧಿಕಾರಿಗಳು, ಹುಲಿಯನ್ನು ಹೋಗಲು ಬಿಡಿ ಎಂದು ಸುಮ್ಮನಾಗಿಸಿದ್ದಾರೆ. ಸುತ್ತಲೂ ಜನರು ನಿಂತಿದ್ದರೂ ಹುಲಿ ಮಾತ್ರ ಯಾವ ಹಂಗಿಲ್ಲದೇ ಗಾಂಭೀರ್ಯದಿಂದ ನಡೆದುಕೊಂಡು ಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.