ಮೋರಿಗಾಂವ್ (ಅಸ್ಸಾಂ) :ಇಲ್ಲಿನ ಧರ್ಮತುಲ್ ಪ್ರಾದೇಶಿಕ ಅರಣ್ಯಾಧಿಕಾರಿಗಳ ಕಛೇರಿಯ ವ್ಯಾಪ್ತಿಯಲ್ಲಿ ಕಾಡಾನೆ ದಾಳಿಗೆ ಸಿಲುಕಿ ಅರಣ್ಯ ಸಿಬ್ಬಂದಿಯೊಬ್ಬರು ಪ್ರಾಣ ಕಳೆದುಕೊಂಡಿದ್ದು, ಅವರ ಸಹೋದ್ಯೋಗಿ ಗಂಭೀರವಾಗಿ ಗಾಯಗೊಂಡಿದ್ದಾರೆ. ನೆಲ್ಲೀ ಪ್ರದೇಶದ ದಹಾಲಿ ಹೆಸರಿನ ಸ್ಥಳದ ಬಳಿ ಶನಿವಾರ ಕಾಡಾನೆಯೊಂದು ದಾಳಿ ಮಾಡಿ ಸ್ಥಳೀಯ ವ್ಯಕ್ತಿ ಅದೀಪ್ ಕೋನ್ವಾರ್ ಎಂಬಾತನನ್ನು ಕೊಂದು ಹಾಕಿತ್ತು. ಹೀಗಾಗಿ ಮೂವರು ಫಾರೆಸ್ಟ್ ಗಾರ್ಡ್ಗಳು ಈ ಆನೆಯನ್ನು ಹುಡುಕಿಕೊಂಡು ಅರಣ್ಯಕ್ಕೆ ಹೋಗಿದ್ದರು.
ಆದರೆ ಆನೆ ಇವರಿಗೆ ಕಾಣಿಸಿದಾಗ ಇವರಲ್ಲಿ ಇಬ್ಬರಿಗೆ ತಮ್ಮ ಬಂದೂಕಿನಿಂದ ಗುಂಡು ಹಾರಿಸಲು ಸಾಧ್ಯವಾಗಿಲ್ಲ. ಬಂದೂಕು ಬಳಸುವುದು ಹೇಗೆಂದು ಗೊತ್ತಿಲ್ಲದಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ಈ ಸಂದರ್ಭದಲ್ಲಿ ಆನೆ ಇವರ ಮೇಲೆ ದಾಳಿ ಮಾಡಿದಾಗ ಇಬ್ಬರು ಗಾರ್ಡ್ಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದರಲ್ಲಿ ಓರ್ವ ಗಾರ್ಡ್ ಘನಕಾಂತ ದಾಸ್ ಮೃತಪಟ್ಟಿದ್ದಾನೆ. ಮತ್ತೋರ್ವ ಗೋಪಾಲ್ ಸೈಕಿಯಾ ಎಂಬಾತ ಗಾಯಗೊಂಡಿದ್ದಾನೆ. ಅರಣ್ಯ ಸಿಬ್ಬಂದಿಗೆ ಬಂದೂಕುಗಳನ್ನು ನಿರ್ವಹಿಸುವ ತರಬೇತಿ ನೀಡಿದ್ದರೆ ಈ ಘಟನೆಯನ್ನು ತಪ್ಪಿಸಬಹುದಿತ್ತು ಎಂದು ಮೃತ ಅರಣ್ಯ ಸಿಬ್ಬಂದಿಯ ಕುಟುಂಬದವರು ಹೇಳಿದ್ದಾರೆ.
ಮತ್ತೊಂದೆಡೆ, ಈ ದುರಂತ ಘಟನೆಯು ರಾಜ್ಯದ ಅರಣ್ಯ ರಕ್ಷಕರಿಗೆ ನೀಡಲಾಗುವ ಶಸ್ತ್ರ ಬಳಕೆ ತರಬೇತಿಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಘಟನೆಯು ಕಾಡು ಪ್ರಾಣಿಗಳನ್ನು ವಿಶೇಷವಾಗಿ ಮಾನವ ಜೀವಕ್ಕೆ ಅಪಾಯವನ್ನುಂಟುಮಾಡುವ ಪ್ರದೇಶಗಳಲ್ಲಿ ಬಂದೂಕುಗಳನ್ನು ಬಳಸುವ ಆಧುನಿಕ ತರಬೇತಿ ವ್ಯವಸ್ಥೆಯ ಅಗತ್ಯವನ್ನು ಎತ್ತಿ ತೋರಿಸಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆ ನಡೆಯದಂತೆ ಸಂಬಂಧಪಟ್ಟ ಅಧಿಕಾರಿಗಳು ಈ ಘಟನೆಯಿಂದ ಪಾಠ ಕಲಿಯಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.