ಸಾಹಿಬ್ ಗಂಜ್( ಜಾರ್ಖಂಡ್) : ಉತ್ತರ ಪ್ರದೇಶದ ವಾರಾಣಾಸಿಯಿಂದ ವಿದೇಶಿ ಪ್ರವಾಸಿಗರನ್ನು ಹೊತ್ತು ಹೊರಟಿದ್ದ ವಿಶ್ವದ ಅತಿ ಉದ್ದದ ನದಿ ವಿಹಾರ ನೌಕೆ ಜಾರ್ಖಂಡ್ನ ಸಾಹಿಬ್ ಗಂಜ್ಗೆ ಆಗಮಿಸಿದೆ. ಶನಿವಾರ ಸಾಹಿಬ್ಗಂಜ್ಗೆ ಆಗಮಿಸಿದ ಗಂಗಾ ವಿಲಾಸ್ ಕ್ರೂಸ್ಗೆ ಜಿಲ್ಲಾಡಳಿತ ವತಿಯಿಂದ ಭವ್ಯ ಸ್ವಾಗತ ಕೋರಲಾಯಿತು. ಜೊತೆಗೆ ಹಡಗಿನಲ್ಲಿದ್ದ ವಿದೇಶಿ ಪ್ರವಾಸಿಗಳನ್ನು ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ನೃತ್ಯದಿಂದ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ರಾಮ್ ನಿವಾಸ್ ಯಾದವ್, ರಾಜಮಹಲ್ ವಿಧಾನಸಭಾ ಕ್ಷೇತ್ರದ ಶಾಸಕ ಅನಂತ್ ಓಜಾ, ಪೊಲೀಸ್ ವರಿಷ್ಠಾಧಿಕಾರಿ ಅನುರಂಜನ್ ಕಿಸ್ಪೊಟ್ಟಾ ಮತ್ತಿತರರು ಉಪಸ್ಥಿತರಿದ್ದರು.
ಎರಡು ದಿನಗಳ ಮುಂಚಿತವಾಗಿ ತಲುಪಿದ ನೌಕೆ : ಇನ್ನು ಈ ಪ್ರವಾಸಿಗರನ್ನು ಹೊತ್ತ ನೌಕೆ ಜನವರಿ 23ರಂದು ಸಾಹಿಬ್ಗಂಜ್ ತಲುಪಲಿದೆ ಎಂದು ಹೇಳಲಾಗಿತ್ತು. ಇದಕ್ಕೂ ಮುನ್ನವೇ ನೌಕೆಯು ಜನವರಿ 20ರ ಸಂಜೆ ಸಾಹಿಬ್ಗಂಜ್ಗೆ ತಲುಪಿದೆ. ಈ ಹಡಗು ಕಳೆದ ಶುಕ್ರವಾರದಿಂದ ಇಲ್ಲಿ ನೆಲೆಸಿತ್ತು. ಹಡಗಿನಲ್ಲಿದ್ದ ಪ್ರವಾಸಿಗರಿಗೆ ಇಲ್ಲಿನ ಜಿಲ್ಲಾಡಳಿತ ವಿವಿಧ ಸೌಕರ್ಯಗಳನ್ನು ಒದಗಿಸಿತ್ತು. ಅಲ್ಲದೆ ಪ್ರವಾಸಿಗರ ಸುರಕ್ಷತೆಗಾಗಿ ಕ್ರಮಗಳನ್ನು ಕೈಗೊಂಡಿತ್ತು. ಪ್ರವಾಸಿಗರಿಗೆ ಯಾವುದೇ ತೊಂದರೆಯಾಗದಂತೆ ಜಿಲ್ಲಾಡಳಿತ ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸಿತ್ತು.
ಮಲ್ಟಿ ಮಾಡಲ್ ಟೆರ್ಮಿನಲ್ ಜೊತೆ ಗ್ರಾಮಸ್ಥರನ್ನು ಭೇಟಿ ಮಾಡಿದ ಪ್ರವಾಸಿಗರು : ಡೆಪ್ಯೂಟಿ ಕಮಿಷನರ್ ರಾಮ್ ನಿವಾಸ್ ಯಾದವ್ ನೇತೃತ್ವದಲ್ಲಿ ಸ್ವಿಟ್ಜರ್ಲೆಂಡ್ ಹಾಗೂ ವಿವಿಧ ದೇಶಗಳಿಂದ ಆಗಮಿಸಿದ ಪ್ರವಾಸಿಗರನ್ನು ಮಲ್ಟಿಮೋಡಲ್ ಟರ್ಮಿನಲ್ಗೆ ಕರೆದೊಯ್ಯಲಾಯಿತು. ಈ ಸಂದರ್ಭದಲ್ಲಿ ಪ್ರವಾಸಿಗರು ಹತ್ತಿರದ ಹಳ್ಳಿಗೂ ಭೇಟಿ ನೀಡಿದರು. ಹಳ್ಳಿಯಲ್ಲಿ ಮಕ್ಕಳು, ವೃದ್ಧರು, ಹಿರಿಯರನ್ನು ಭೇಟಿಯಾಗಿ ವಿವಿಧ ಫೋಟೋಗಳನ್ನು ತೆಗೆದರು. ಜೊತೆಗೆ ಇಲ್ಲಿನ ಪರಿಸರ ಮತ್ತು ಶಾಂತವಾದ ವಾತಾವರಣ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು.