ಚಂಡೀಗಢ: ಪಾಕಿಸ್ತಾನದಲ್ಲಿ ಮೂವರು ಬಾಲಕಿಯರನ್ನು ಬಲವಂತವಾಗಿ ಮತಾಂತರಗೊಳಿಸಿರುವ ಘಟನೆ ಬೆಳಕಿಗೆ ಬಂದಿದೆ. ಇಲ್ಲಿ, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಅವ್ಯಾಹತವಾಗಿ ಮತ್ತು ವ್ಯಾಪಕವಾಗಿ ಮುಂದುವರಿಯುತ್ತಿದೆ. ಈ ಹಿಂದೆ ಪಾಕಿಸ್ತಾನದಲ್ಲಿ ಸಂಪತ್ತಿಗಾಗಿ ದೇವಾಲಯವನ್ನು ನೆಲಸಮಗೊಳಿಸಲಾಗಿತ್ತು. ಇದೀಗ ಮೂವರು ಬಾಲಕಿಯರನ್ನು ಬಲವಂತವಾಗಿ ಮತಾಂತರ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಈ ಬಗ್ಗೆ ಅಲ್ಪಸಂಖ್ಯಾತ ಸಂತ್ರಸ್ತ ಕುಟುಂಬಗಳು ಭಾರತ ಸರ್ಕಾರದಿಂದ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ. ಈ ಬಗ್ಗೆ ಬಿಜೆಪಿ ಮುಖಂಡ ಮಂಜಿಂದರ್ ಸಿಂಗ್ ಸಿರ್ಸಾ ಟ್ವೀಟ್ ಮಾಡಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಘಟನೆ ಸಂಬಂಧ ಮಧ್ಯಪ್ರವೇಶ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಹೀಮ್ ಯಾರ್ ಖಾನ್ ಜಿಲ್ಲೆಯಲ್ಲಿ ಧಾರ್ಮಿಕ ಮತಾಂತರದ ಘಟನೆ ವರದಿಯಾಗಿದೆ. ಪಂಜಾಬ್ ಪ್ರಾಂತ್ಯದ ಸಾದಿಕಾಬಾದ್‌ನಲ್ಲಿ ವಾಸವಾಗಿರುವ ಕುಟುಂಬಗಳಿಗೆ ಸೇರಿದ 16 ವರ್ಷದೊಳಳಗಿನ ಮೂವರು ಬಾಲಕಿಯರನ್ನು ಅಪಹರಿಸಿ, ಬಲವಂತವಾಗಿ ಮತಾಂತರ ಮಾಡಿರುವ ಬಗ್ಗೆ ಸಂತ್ರಸ್ತ ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.
ಘಟನೆ ಕುರಿತು ಬಿಜೆಪಿ ಮುಖಂಡ ಮಂಜಿಂದರ್ ಸಿಂಗ್ ಸಿರ್ಸಾ ಪ್ರತಿಕ್ರಿಯಿಸಿ, ಪಾಕಿಸ್ತಾನದಲ್ಲಿ ದೇವಸ್ಥಾನಗಳ ಮೇಲೆ ದಾಳಿ ಮತ್ತು ಅಲ್ಪಸಂಖ್ಯಾತ ಸಮುದಾಯದ ಬಾಲಕಿಯರನ್ನು ಬಲವಂತದ ಮತಾಂತರ ಮತ್ತು ಮದುವೆ ಪ್ರಕರಣಗಳು ಆಗಾಗ ನಡೆಯುತ್ತಲೇ ಇರುತ್ತವೆ. ಸದ್ಯ ಪಂಜಾಬ್‌ನ ಸಾದಿಕಾಬಾದ್ ಜಿಲ್ಲೆಯ ಮೂಲದ ಮೂವರು ಬಾಲಕಿಯರನ್ನು ದೇಹರ್ಕಿಯಲ್ಲಿರುವ ಪಿರ್ ಮಿಯಾನ್ ಜಾವೇದ್ ಅಹ್ಮದ್ ಖಾದ್ರಿ ಅವರ ಮನೆಯಲ್ಲಿ ಬಂಧಿಸಿ ಬಲವಂತವಾಗಿ ಮತಾಂತರಿಸಲಾಗಿದೆ. ಈ ಬಾಲಕಿಯರ ಕುಟುಂಬದವರು ಪದೇ ಪದೆ ನನ್ನನ್ನು ಸಂಪರ್ಕಿಸಿ ಸಹಾಯ ಕೋರುತ್ತಿದ್ದಾರೆ. ಪಾಕಿಸ್ತಾನದ ಈ ಅಲ್ಪಸಂಖ್ಯಾತ ಕುಟುಂಬಗಳಿಗೆ ಸಹಾಯ ಮಾಡಲು ಭಾರತ ಸರ್ಕಾರ ಮುಂದೆ ಬರಬೇಕು ಎಂದು ಮನವಿ ಮಾಡಿದ್ದಾರೆ.