ನವದೆಹಲಿ: 2023 ರ ವಿಧಾನಸಭಾ ಚುನಾವಣೆಯಲ್ಲಿ ನಾಗಾಲ್ಯಾಂಡ್‌ನಲ್ಲಿ ಮೊದಲ ಬಾರಿಗೆ ಇಬ್ಬರು ಮಹಿಳಾ ಅಭ್ಯರ್ಥಿಗಳು ಆಯ್ಕೆಯಾಗುವ ಮೂಲಕ ಇತಿಹಾಸ ಸೃಷ್ಟಿಯಾಗಿದೆ. ಸಲ್ಹೌಟುವೊನುವೊ ಕ್ರೂಸ್ ಮತ್ತು ಹೇಕಾನಿ ಜಖಾಲು ಇವರಿಬ್ಬರೂ ನಾಗಾಲ್ಯಾಂಡ್ ವಿಧಾನಸಭೆಗೆ ಮೊಟ್ಟ ಮೊದಲ ಬಾರಿಗೆ ಆಯ್ಕೆಯಾದ ಮಹಿಳಾ ಶಾಸಕಿಯರಾಗಿದ್ಧಾರೆ. ಇಬ್ಬರೂ ಅಭ್ಯರ್ಥಿಗಳು ಆಡಳಿತಾರೂಢ ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ (ಎನ್‌ಡಿಪಿಪಿ)ಗೆ ಸೇರಿದ್ದಾರೆ. ಪಶ್ಚಿಮ ಅಂಗಮಿ ಎಸಿಯಿಂದ ಸಲ್ಹೌಟುವೊನುವೊ ಕ್ರೂಸ್ ಗೆದ್ದರೆ, ಹೆಕಾನಿ ಜಖಾಲು ದಿಮಾಪುರ್-III ಕ್ಷೇತ್ರದಲ್ಲಿ ಗೆದ್ದಿದ್ದಾರೆ.
ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಒಟ್ಟು 183 ಅಭ್ಯರ್ಥಿಗಳ ಪೈಕಿ 48 ವರ್ಷದ ವಕೀಲೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಜಖಾಲು ಲೋಕ ಜನಶಕ್ತಿ ಪಕ್ಷದ ಅಝೆಟೊ ಝಿಮೊಮಿ ಅವರನ್ನು ಸೋಲಿಸಿದರು. ಆಡಳಿತಾರೂಢ ಎನ್‌ಡಿಪಿಪಿ-ಬಿಜೆಪಿ ಮೈತ್ರಿಕೂಟವು ಮೂರು ಸ್ಥಾನಗಳನ್ನು ಗೆದ್ದು 35 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿರುವ ಕಾರಣದಿಂದ ಮತ ಎಣಿಕೆ ನಡೆಯುತ್ತಿರುವ ನಾಗಾಲ್ಯಾಂಡ್‌ನಲ್ಲಿ ಅಧಿಕಾರ ಉಳಿಸಿಕೊಳ್ಳಲು ಸಜ್ಜಾಗಿದೆ.
ಜಖಾಲು ಇವರು ಅಮೆರಿಕದಲ್ಲಿ ಶಿಕ್ಷಣ ಪಡೆದು ವಕೀಲರಾಗಿದ್ದಾರೆ. ಸಾಮಾಜಿಕ ಕಾರ್ಯಕರ್ತೆಯೂ ಆಗಿರುವ ಇವರು ಯೂತ್ ನೆಟ್ ಸಂಸ್ಥೆಯ ಸಂಸ್ಥಾಪಕರಾಗಿದ್ದಾರೆ. ಅಂತಾರಾಷ್ಟ್ರೀಯ ಮಹಿಳಾ ದಿನದಂದು ರಾಷ್ಟ್ರಪತಿ ಭವನದಲ್ಲಿ ಭಾರತದ ರಾಷ್ಟ್ರಪತಿ ಅವರಿಂದ ನಾರಿ ಶಕ್ತಿ ಪುರಸ್ಕಾರ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಜಖಾಲು ತನ್ನ ಪ್ರಣಾಳಿಕೆಯಲ್ಲಿ ಯುವ ಅಭಿವೃದ್ಧಿ, ಮಹಿಳಾ ಸಬಲೀಕರಣ, ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ಮಾದರಿ ಕ್ಷೇತ್ರದ ಬಗ್ಗೆ ತಮ್ಮ ದೃಷ್ಟಿಕೋನ ಹಂಚಿಕೊಂಡಿದ್ದಾರೆ.
ನಾಗಲ್ಯಾಂಡ್ಗೆ ರಾಜ್ಯದ ಸ್ಥಾನಮಾನ ದೊರತಾಗಿಂದ ಇರಲಿಲ್ಲ ಮಹಿಳಾ ಶಾಸಕಿಯರು:1963ರಲ್ಲಿ ನಾಗಾಲ್ಯಾಂಡ್‌ಗೆ ರಾಜ್ಯ ಸ್ಥಾನಮಾನ ದೊರೆತಾಗಿನಿಂದ 60 ಸದಸ್ಯ ಬಲದ ವಿಧಾನಸಭೆಯಲ್ಲಿ ಮಹಿಳಾ ಶಾಸಕಿ ಸಿಕ್ಕಿರಲಿಲ್ಲ. ಮಹಿಳೆಯರು ಚುನಾವಣೆಗೆ ಸ್ಪರ್ಧಿಸಿದ್ದರೂ ಅವರಾರು ಆಯ್ಕೆಯಾಗಿರಲಿಲ್ಲ. ಈ ವರ್ಷ ಚುನಾವಣೆಯಲ್ಲಿ ಸ್ಪರ್ಧಿಸಿದ ನಾಲ್ವರು ಮಹಿಳಾ ಅಭ್ಯರ್ಥಿಗಳೆಂದರೆ ಜಖಾಲು, ಕ್ರೂಸೆ, ಕಾಂಗ್ರೆಸ್‌ನ ರೋಸಿ ಥಾಮ್ಸನ್ ಮತ್ತು ಬಿಜೆಪಿಯ ಕಾಹುಲಿ ಸೇಮಾ.
ಬಿಜೆಪಿಯ ಕಜೆಟೊ ಅವಿರೋಧ ಆಯ್ಕೆ:ಅಕುಲುಟೊ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕಜೆಟೊ ಕಿನಿಮಿ ಅವಿರೋಧವಾಗಿ ಗೆದ್ದಿದ್ದಾರೆ ಮತ್ತು ಬಿಜೆಪಿ ಅಭ್ಯರ್ಥಿ ಪಿ ಬಶಾಂಗ್ಮೊಂಗ್ಬಾ ಚಾಂಗ್ ಟುಯೆನ್ಸಾಂಗ್ ಸದರ್-I ಸ್ಥಾನವನ್ನು ಗೆದ್ದಿದ್ದಾರೆ. ನಾಗಾಲ್ಯಾಂಡ್‌ನ ಶಾಮಟರ್ ಚೆಸ್ಸೋರ್ ವಿಧಾನಸಭಾ ಕ್ಷೇತ್ರದಲ್ಲಿ ಎನ್‌ಡಿಪಿಪಿ ಅಭ್ಯರ್ಥಿ ಎಸ್ ಕೆಯೊಶು ಯಿಮ್‌ಚುಂಗರ್ ಗೆದ್ದಿದ್ದಾರೆ. ಮುಖ್ಯಮಂತ್ರಿ ನೆಫಿಯು ರಿಯೊ ನೇತೃತ್ವದ ನ್ಯಾಶನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿಯು 2018 ರ ಚುನಾವಣೆಯ ಸಮಯದಿಂದ ಬಿಜೆಪಿಯೊಂದಿಗೆ ಮೈತ್ರಿಯಲ್ಲಿದೆ. ಹಿಂದಿನ ಚುನಾವಣೆಯಲ್ಲಿ ಮೈತ್ರಿಕೂಟ 30 ಸ್ಥಾನಗಳನ್ನು ಗೆದ್ದಿದೆ. ಎನ್‌ಪಿಎಫ್ 26 ಸ್ಥಾನಗಳನ್ನು ಗೆದ್ದಿತ್ತು.
ನಾಗಾಲ್ಯಾಂಡ್‌ನಿಂದ 1977 ರಲ್ಲಿ ರಾನೊ ಎಂ ಶೈಜಾ ಎಂಬ ಮಹಿಳೆ ಲೋಕಸಭೆಗೆ ಆಯ್ಕೆಯಾಗಿದ್ದರು. 2022 ರಲ್ಲಿ, ಎಸ್ ಫಾಂಗ್ನಾನ್ ಕೊನ್ಯಾಕ್ ನಾಗಾಲ್ಯಾಂಡ್‌ನಿಂದ ಬಿಜೆಪಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು ಮತ್ತು ಮೇಲ್ಮನೆಯಲ್ಲಿ ಸ್ಥಾನ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದರು. ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠವಲೆ) ಎರಡು ಸ್ಥಾನಗಳನ್ನು ಗೆದ್ದಿದೆ. ಅದು ತುಯೆನ್ಸಾಂಗ್ ಸದರ್ II ಕ್ಷೇತ್ರ ಮತ್ತು ನೋಕ್ಸೆನ್ ಕ್ಷೇತ್ರಗಳಲ್ಲಿ ಜಯಿಸಿದೆ.
ಇದನ್ನೂ ಓದಿ : ನಾಗಾಲ್ಯಾಂಡ್, ತ್ರಿಪುರಾ ಬಿಜೆಪಿ ತೆಕ್ಕೆಗೆ; ಮೇಘಾಲಯ ಅತಂತ್ರ ಸಾಧ್ಯತೆ