ದಿಬ್ರುಗಢ್ (ಅಸ್ಸಾಂ) : ಒಂದೇ ಬಾರಿಗೆ ಮೂರು ಅಥವಾ ನಾಲ್ಕು ಮಕ್ಕಳು ಹುಟ್ಟಿದ ಸುದ್ದಿಯನ್ನು ಕೇಳುತ್ತಲೇ ಇರುತ್ತೇವೆ. ಆದರೆ ಪುಟ್ಟ ಕಂದಮ್ಮನ ಅದರಲ್ಲೂ ಬಾಲಕನ ಹೊಟ್ಟೆಯಲ್ಲಿ ಭ್ರೂಣ ಪತ್ತೆಯಾಗಿರುವ ಅಚ್ಚರಿಯ ಘಟನೆಯೊಂದು ಅಸ್ಸಾಂನಲ್ಲಿ ಬೆಳಕಿಗೆ ಬಂದಿದೆ. ದಿಬ್ರುಗಢ್ ಜಿಲ್ಲೆಯಲ್ಲಿ 11 ತಿಂಗಳ ಗಂಡು ಮಗುವಿನ ಹೊಟ್ಟೆಯಲ್ಲಿ ಭ್ರೂಣ ಕಂಡುಬಂದಿದೆ. ಇಲ್ಲಿನ ಅಪೇಕ್ಷಾ ಆಸ್ಪತ್ರೆಯ ವೈದ್ಯರು 2 ಕೆಜಿ ತೂಕದ ಭ್ರೂಣವನ್ನು ಶಸ್ತ್ರಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಹೊರತೆಗೆದಿದ್ದು, ಮಗು ಆರೋಗ್ಯವಾಗಿದೆ.
ಅರುಣಾಚಲ ಪ್ರದೇಶದ ಸಾಂಗ್ಲಾಂಗ್ ಜಿಲ್ಲೆಯ ಈ ಗಂಡು ಮಗುವನ್ನು ಅನಾರೋಗ್ಯದ ಕಾರಣಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಿಶುವನ್ನು ಪರೀಕ್ಷಿಸಿದ ವೈದ್ಯರಿಗೆ ಹೊಟ್ಟೆಯಲ್ಲಿ ಭ್ರೂಣ ಇರುವುದು ಗೊತ್ತಾಗಿದೆ. ವೈದ್ಯರ ತಂಡ ಶನಿವಾರ 3 ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಿ ಭ್ರೂಣವನ್ನು ಹೊರತೆಗೆದಿದ್ದಾರೆ. ಇದಕ್ಕೂ ಮುನ್ನ ಇಂಥದ್ದೇ ಮತ್ತೊಂದು ಪ್ರಕರಣವನ್ನು ಅಪೇಕ್ಷಾ ಆಸ್ಪತ್ರೆಯ ವೈದ್ಯರು ಬಗೆಹರಿಸಿದ್ದರು.
ಭ್ರೂಣ ಬೆಳವಣಿಗೆ ಹೇಗೆ ಸಾಧ್ಯ?: ವೈದ್ಯಕೀಯ ಪರಿಭಾಷೆಯಲ್ಲಿ ಇದನ್ನು ಫೀಟಸ್-ಇನ್-ಫೀಟು (ಎಫ್‌ಐಎಫ್) ಎಂದು ಕರೆಯುತ್ತಾರೆ. ಇದು ಅಪರೂಪದ ವಿದ್ಯಮಾನವಾಗಿದ್ದು, ಇದರಲ್ಲಿ ಒಂದು ದೋಷಪೂರಿತ ಕಶೇರುಕ ಭ್ರೂಣವು ಅದರ ಅವಳಿ ದೇಹದೊಳಗೆ ಸುತ್ತುವರಿಯಲ್ಪಟ್ಟಿರುತ್ತದೆ. ಸಾಮಾನ್ಯವಾಗಿ ಐದು ಲಕ್ಷದಲ್ಲಿ ಒಂದು ಮಗುವಿನಲ್ಲಿ ಮಾತ್ರ ಅಪರೂಪವಾಗಿ ಇದು ಕಂಡುಬರುತ್ತದೆ ಎಂದು ವೈದ್ಯರು ಹೇಳುತ್ತಾರೆ.