ಪಾಟ್ನಾ (ಬಿಹಾರ್): ಉತ್ತರ ಭಾರತದಲ್ಲಿ ಮಾನ್ಸೂನ್ ಮಳೆ ಆರಂಭವಾಗಿದ್ದು, ಕೆಲ ರಾಜ್ಯಗಳಲ್ಲಿ ಅವಾಂತರ ಸೃಷ್ಟಿಯಾಗಿದೆ. ಬಿಹಾರದ ಗೋಪಾಲ್ಗಂಗ್ ಜಿಲ್ಲೆಯಲ್ಲಿ ಪ್ರವಾಹ ಸೃಷ್ಟಿಯಾಗಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಇಲ್ಲಿನ ಸುಮಾರು 300 ಮನೆಗಳು ಪ್ರವಾಹದ ನೀರಿನಿಂದ ಆವೃತವಾಗಿದ್ದು, ಖಪ್ ಮಕ್ಸೋದ್ಪುರ ಗ್ರಾಮ ದ್ವೀಪವಾಗಿ ಮಾರ್ಪಟ್ಟಿದೆ.
ಇದರಿಂದ ಗ್ರಾಮದ ಸಾವಿರಾರು ಮಂದಿ ಸುರಕ್ಷಿತ ಪ್ರದೇಶಗಳಿಗೆ ತೆರಳುತ್ತಿದ್ದು, ನಗರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ನೀರಿನಿಂದ ಆವೃತವಾಗಿದೆ. ಅಲ್ಲದೆ ತೀವ್ರ ಸುರಿಯುತ್ತಿರುವುದರಿಂದ ಹೊರಬರಲಾಗದೇ ನೀರು ತುಂಬಿರುವ ಮನೆಯಲ್ಲಿಯೇ ಜನರು ನೆಲೆಸುವಂತಾಗಿದೆ.
ರಾಜಧಾನಿ ದೆಹಲಿಯಲ್ಲೂ ತುಂತುರು ಮಳೆ
ಇತ್ತ ರಾಜಧಾನಿ ದೆಹಲಿಯಲ್ಲಿ ನಿನ್ನೆಯಿಂದ ತುಂತುರು ಮಳೆಯಾಗುತ್ತಿದೆ. ದೆಹಲಿಗೆ ಮಾನ್ಸೂನ್ ಪ್ರವೇಶಿಸಲು ಇನ್ನೂ ಎರಡ್ಮೂರು ದಿನಗಳು ಬಾಕಿ ಇದ್ದು, ಅವಧಿಗೂ ಮೊದಲೆ ಮಳೆಯಾಗುತ್ತಿದೆ. ಮಾನ್ಸೂನ್ ಆರಂಭ ಹಿನ್ನೆಲೆ ರಾಜಸ್ಥಾನ. ಹರಿಯಾಣ, ದೆಹಲಿ ಹಾಗೂ ಪಂಜಾಬ್ನ ಕೆಲ ಭಾಗದಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಈ ನಡುವೆ ದೆಹಲಿಯ ಪಾತಿಮ್ಪುರ್ನಲ್ಲಿ 1.1 ಮಿಮೀ ಮಳೆಯಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಪಶ್ವಿಮ ಬಂಗಾಳದಲ್ಲಿ ಮಳೆಯಿಂದ ಉಂಟಾಗಿರುವ ಪ್ರವಾಹ ಮಹಾರಾಷ್ಟ್ರದಲ್ಲಿ ವರುಣನ ಅಬ್ಬರ
ಇನ್ನು ಮಹಾರಾಷ್ಟ್ರದಲ್ಲಿ ಮನ್ಸೂನ್ ಮಳೆಯಬ್ಬರ ಜೋರಾಗಿದೆ. ಭಾರೀ ಮಳೆಯಿಂದಾಗಿ ಥಾಣೆಯಲ್ಲಿ ಕಟ್ಟಡ ಕಸಿದು 35 ವರ್ಷದ ವ್ಯಕ್ತಿ ಸಾವನಪ್ಪಿದ್ದಾನೆ. ವೈವರ್ ಪ್ರದೇಶದಲ್ಲಿ ನೀರಿನ ಹೊಡೆತಕ್ಕೆ ಸಿಲುಕಿದ್ದ 3 ಎಮ್ಮೆಗಳು ಕೊಚ್ಚಿಕೊಂಡು ಹೋಗಿವೆ. ಅದರಲ್ಲಿ ಎರಡನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ. ಈ ನಡುವೆ ಥಾಣೆ, ಪಾಲ್ಘರ್, ರಾಯಗಢದಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಕರ್ನಾಟಕದಲ್ಲಿ ಮುಸಲಧಾರೆ ಜೋರು:
ದಕ್ಷಿಣ ಕರ್ನಾಟಕದಿಂದ ಉತ್ತರ ಕೇರಳ ಕರಾವಳಿಗೆ ಮಾರುತ ಸಾಗುತ್ತಿದ್ದು, ಅದರ ಪ್ರಭಾವದಡಿಯಲ್ಲಿ ಮುಂದಿನ 2-3 ದಿನಗಳಲ್ಲಿ ಕೊಂಕಣ, ಗೋವಾ ಮತ್ತು ಮಧ್ಯ ಮಹಾರಾಷ್ಟ್ರದಲ್ಲಿ ಭಾರೀ ಪ್ರಮಾಣದ ಮಳೆಯಾಗುವ ಸಾಧ್ಯತೆಯಿದೆ. ಮುಂದಿನ 24 ಗಂಟೆಗಳಲ್ಲಿ ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಪ್ರತ್ಯೇಕವಾಗಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಪ್ರಕಟಣೆಯಲ್ಲಿ ತಿಳಿಸಿದೆ.
ಮೋದಿ ರಾಜ್ಯದಲ್ಲೂ ಮಳೆ ಹಾವಳಿ
ಗುಜರಾತ್ ಭಾಗದಲ್ಲೂ ಮಳೆ ಮುಂದುವರಿದಿದ್ದು, ಇಲ್ಲಿನ ವಲ್ಲಭ ವಿದ್ಯಾನಗರದಲ್ಲಿ 76 ಮಿ.ಮೀ ಹಾಗೂ ಭಾವ್ನಗರದಲ್ಲಿ 72 ಮಿ.ಮೀಟರ್ ಮಳೆಯಾಗಿದೆ. ಇತ್ತ ಉತ್ತರಾಖಂಡ್ನಲ್ಲಿ ಭಾರೀ ಮಳೆ ಮತ್ತು ಭೂಕುಸಿತದಿಂದಾಗಿ ಚಮೋಲಿ ಜಿಲ್ಲೆಯ ಗುಲಾಬ್‌ಕೋಟಿ ಮತ್ತು ಕೌಡಿಯಾದಲ್ಲಿ ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗಿದೆ.
ಓದಿ:Black fungus: ಗುಣಮುಖರಿಗಿಂತ ಮೃತಪಟ್ಟವರ ಪ್ರಮಾಣವೇ ಹೆಚ್ಚು- ಇಲ್ಲಿಯವರೆಗೆ 2,856 ಕೇಸ್