ಚೆನ್ನೈ: ಕಳೆದ ಡಿಸೆಂಬರ್ ತಿಂಗಳಲ್ಲಿ ಟೇಕ್ ಆಫ್ ಆಗಲು ಅಣಿಯಾಗಿದ್ದ ಇಂಡಿಗೋ ವಿಮಾನದ ತುರ್ತು ಬಾಗಿಲನ್ನು ಪ್ರಯಾಣಿಕನೊಬ್ಬ ತೆರೆದ ಘಟನೆ ವರದಿಯಾಗಿದೆ. ಈ ಘಟನೆಯಿಂದಾಗಿ ಪ್ರಯಾಣಿಕರು ವಿಮಾನದಿಂದ ಕೆಳಗಿಳಿದು, ತಪಾಸಣೆ ಬಳಿಕ ವಿಳಂಬವಾಗಿ ಹಾರಾಟ ನಡೆಸಬೇಕಾಯಿತು.
ಡಿಜಿಸಿಎದಿಂದ ಸ್ಪಷ್ಟನೆ:ಡಿಸೆಂಬರ್ 10 ರಂದು ಇಂಡಿಗೋ 6E ಫ್ಲೈಟ್ 6E 7339 ಚೆನ್ನೈನಿಂದ ತಿರುಚಿರಾಪಳ್ಳಿಗೆ ಪ್ರಯಾಣ ಬೆಳೆಸಲು ಸಜ್ಜಾಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಘಟನೆ ಬಳಿಕ ಸುರಕ್ಷತಾ ಕ್ರಮಗಳನ್ನು ಪಾಲಿಸಲಾಯಿತು ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ತಿಳಿಸಿದೆ. ವಿಮಾನ ಟೆಕ್ಆಫ್ ಆಗುವ ಮುನ್ನವೇ ಆಕಸ್ಮಿಕವಾಗಿ ಈ ಘಟನೆ ನಡೆದಿದ್ದು, ಸಿಬ್ಬಂದಿ ಕೂಡಲೇ ಎಚ್ಚೆತ್ತುಕೊಂಡು, ತುರ್ತು ಬಾಗಿಲು ಬಂದ್ ಮಾಡುವ, ವಿಮಾನದ ಇತರ ಸುರಕ್ಷತಾ ಕ್ರಮಗಳನ್ನು ತಪಾಸಣೆಗೆ ಒಳಪಡಿಸಲಾಯಿತು. ಪ್ರಯಾಣಿಕರ ಸುರಕ್ಷತೆಯಲ್ಲಿ ಯಾವುದೇ ಲೋಪವಾಗದಂತೆ ಕ್ರಮ ವಹಿಸಲಾಯಿತು ಎಂದು ಡಿಜಿಸಿಎ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇಂಡಿಗೋ ಏರ್ಲೈನ್ಸ್ನಿಂದಲೂ ಹೇಳಿಕೆ: ಮತ್ತೊಂದೆಡೆ, ಪ್ರಯಾಣಿಕರೊಬ್ಬರು ಆಕಸ್ಮಾತ್ ಆಗಿ ವಿಮಾನದ ತುರ್ತು ಬಾಗಿಲನ್ನು ತೆರೆದಿದ್ದು, ಬಳಿಕ ಅವರು ಕ್ಷಮೆಕೋರಿದರು ಎಂದು ಇಂಡಿಗೋ ಏರ್ಲೈನ್ಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲ ತಪಾಸಣೆಗಳನ್ನು ನಡೆಸಲಾಯಿತು. ಇದರಿಂದಾಗಿ ವಿಮಾನ ಹಾರಾಟದಲ್ಲಿ ವಿಳಂಬವಾಯಿತು ಎಂದು ಏರ್ಲೈನ್ಸ್ ತಿಳಿಸಿದೆ. ಆದರೆ ಡಿಜಿಸಿಎ ಹಾಗೂ ಇಂಡಿಗೋ ಬಾಗಿಲು ತೆರೆದ ಪ್ರಯಾಣಿಕರ ಗುರುತನ್ನು ಬಹಿರಂಗಪಡಿಸಿಲ್ಲ.