ಜಾಮ್‌ನಗರ(ಗುಜರಾತ್): ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ತುರ್ತು ಭೂಸ್ಪರ್ಶ ಮಾಡಿದ ಘಟನೆ ಗುಜರಾತ್ನ ಜಾಮ್‌ನಗರ ವಿಮಾನ ನಿಲ್ದಾಣದಲ್ಲಿ ಸೋಮವಾರ ರಾತ್ರಿ ನಡೆದಿದೆ. ಬೆದರಿಕೆ ಹಿನ್ನೆಲೆಯಲ್ಲಿ ಬಾಂಬ್ ಸ್ಕ್ವಾಡ್, ಪೊಲೀಸ್ ಅಧಿಕಾರಿಗಳು ವಿಮಾನ ನಿಲ್ದಾಣದತ್ತ ಧಾವಿಸಿದ್ದು, ಜಾಮ್‌ನಗರ ವಿಮಾನ ನಿಲ್ದಾಣವನ್ನು ಎಲ್ಲ ದಿಕ್ಕುಗಳಿಂದಲೂ ಬಂದ್ ಮಾಡಿ ಪರಿಶೀಲನೆ ನಡೆಸಲಾಗುತ್ತಿದೆ.
ಅಂತಾರಾಷ್ಟ್ರೀಯ ವಿಮಾನವು ಮೆಕ್ಸಿಕೋದಿಂದ ಗೋವಾಕ್ಕೆ ತೆರಳುತ್ತಿತ್ತು. ಬಾಂಬ್ ಸ್ಫೋಟದ ಸಾಧ್ಯತೆಯ ಭೀತಿಯಿಂದ ವಿಮಾನವನ್ನು ಜಾಮ್‌ನಗರ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಗಿದೆ. ಗೋವಾ ಎಟಿಸಿಗೆ ಬಾಂಬ್ ಬೆದರಿಕೆ ಮೇಲ್ ಬಂದಿತ್ತು. ಮಾಸ್ಕೋ - ಗೋವಾ ಫ್ಲೈಟ್‌ನಲ್ಲಿದ್ದ ಎಲ್ಲಾ 244 ಪ್ರಯಾಣಿಕರನ್ನು ರಾತ್ರಿ 9.49ರ ಸುಮಾರಿಗೆ ಜಾಮ್‌ನಗರ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವಿಮಾನದಲ್ಲಿ ಬಾಂಬ್ ಇರುವ ಬಗ್ಗೆ ಜಾಮ್‌ನಗರ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಲಾಗಿದೆ. ಘಟನೆಯ ಸಂಪೂರ್ಣ ಮಾಹಿತಿ ಪಡೆದ ನಂತರ ಜಿಲ್ಲಾಧಿಕಾರಿಗಳೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠರೂ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.