ನವದೆಹಲಿ: ದೇಶದ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪು ಕೋಟೆಯಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿ ದೇಶವನ್ನುದ್ದೇಶಿಸಿ ಮಾತನಾಡಿದರು. ಪಂಚಪ್ರಾಣಗಳ ಪ್ರತಿಪಾದನೆ ಮಾಡಿದರು.
ದೇಶದ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ಜಗತ್ತಿನಾದ್ಯಂತ ನಮ್ಮ ಭಾರತದ ಧ್ವಜ ಹಾರಾಡುತ್ತಿದೆ. ಇಂದು ಭಾರತದ ಪಾಲಿಗೆ ಐತಿಹಾಸಿಕ ದಿನ. ಇಡೀ ದೇಶ ಇಂದು ಹೊಸ ಸಂಕಲ್ಪ ಮಾಡಬೇಕು. ಇಡೀ ದೇಶ ಅಂದು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿತ್ತು. ದೇಶದ ಮೂಲೆ ಮೂಲೆಯಿಂದ ಹೋರಾಟ ನಡೆದಿತ್ತು ಎಂದು ಹೇಳಿದರು.
ನಾರಾಯಣ ಗುರು ನೆನೆದ ಮೋದಿ:ಸ್ವಾತಂತ್ರ್ಯ ಹೋರಾಟದಲ್ಲಿ ದೇಶದ ನಾರಿ ಶಕ್ತಿ ಏನೆಂಬದು ಸಹ ಸಾಬೀತಾಗಿತ್ತು. ನೆಹರು, ಲಾಲ್ ಬಹದ್ದೂರ್ ಶಾಸ್ತ್ರಿ, ನಾರಾಯಣ ಗುರು, ಸ್ವಾಮಿ ವಿವೇಕಾನಂದ, ರವೀಂದ್ರನಾಥ್ ಠಾಗೂರ್ ಸೇರಿದಂತೆ ದೇಶದ ವಾಸಿಗಳು ಸ್ವಾತಂತ್ರ್ಯ ಹೋರಾಟಕ್ಕೆ ಹೋರಾಡಿದ್ದರು. ಅವರಿಗೆಲ್ಲರೂ ನಮ್ಮ ದೊಡ್ಡ ನಮನ. ಅವರೆಲ್ಲರೂ ದೇಶದ ಚೇತನವಾಗಿದ್ದಾರೆ ಎಂದರು.
ನಾರಿ ಶಕ್ತಿಯ ಭಾರತ:ಭಾರತದ ಮೇಲಿನ ಪ್ರೀತಿಗಾಗಿ ತ್ಯಾಗ, ಬಲಿದಾನ ಮತ್ತು ದೇಶಕ್ಕಾಗಿ ಜೀವ ಕೊಟ್ಟವರನ್ನೂ ನಾವು ಎಂದಿಗೂ ಮರೆಯಬಾರದು. ಹೋರಾಟದ ಹಾದಿಯಲ್ಲಿ ಪ್ರಾಣ ನೀಡಿದ ಬಾಪು, ನೇತಾಜಿ ಸುಭಾಷ್ ಚಂದ್ರ ಬೋಸ್, ಬಾಬಾಸಾಹೇಬ್ ಅಂಬೇಡ್ಕರ್, ವೀರ ಸಾವರ್ಕರ್ ಅವರಿಗೆ ನಾಗರಿಕರು ನಮನ ಸಲ್ಲಿಸಬೇಕು. ರಾಣಿ ಲಕ್ಷ್ಮೀಬಾಯಿ, ಝಲ್ಕರಿ ಬಾಯಿ, ಚೆನ್ನಮ್ಮ, ಬೇಗುನ್ ಹಜರತ್ ಮಹಲ್ ಸೇರಿದಂತೆ ಭಾರತದ ಮಹಿಳೆಯರ ಶಕ್ತಿಯನ್ನು ನೆನಪಿಸಿಕೊಂಡಾಗ ಪ್ರತಿ ಭಾರತದ ಪ್ರಜೆಯೂ ಹೆಮ್ಮೆ ಪಡುತ್ತಾರೆ.
ಮಂಗಲ್ ಪಾಂಡೆ, ತಾತ್ಯಾ ಟೋಪೆ, ಭಗತ್ ಸಿಂಗ್, ಸುಖದೇವ್, ರಾಜಗುರು, ಚಂದ್ರಶೇಖರ್ ಆಜಾದ್, ಅಶ್ಫಾಕುಲ್ಲಾ ಖಾನ್, ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಬ್ರಿಟಿಷರ ಆಳ್ವಿಕೆಯ ಬುನಾದಿ ಬುಡಮೇಲು ಮಾಡಿದ ನಮ್ಮ ಅಸಂಖ್ಯಾತ ಕ್ರಾಂತಿ ವೀರರಿಗೆ ಈ ರಾಷ್ಟ್ರ ಕೃತಜ್ಞತೆ ಸಲ್ಲಿಸುತ್ತದೆ ಎಂದು ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೆಲ್ಲರ ಹೋರಾಟವನ್ನು ನೆನಪಿಸಿಕೊಂಡರು.
ಇದು ಎಲ್ಲ ನಾಗರಿಕರನ್ನು ಸ್ಮರಿಸುವ ದಿನ:ಆಜಾದಿ ಮಹೋತ್ಸವದ ಸಂದರ್ಭದಲ್ಲಿ ನಾವು ನಮ್ಮ ಅನೇಕ ರಾಷ್ಟ್ರೀಯ ವೀರರನ್ನು ಸ್ಮರಿಸಿದ್ದೇವೆ. ಆಗಸ್ಟ್ 14 ರಂದು ನಾವು ವಿಭಜನೆಯ ಭೀಕರತೆಯನ್ನು ನೆನಪಿಸಿಕೊಂಡಿದ್ದೇವೆ. ಕಳೆದ 75 ವರ್ಷಗಳಲ್ಲಿ ನಮ್ಮ ದೇಶವನ್ನು ಮುನ್ನಡೆಸಲು ಕೊಡುಗೆ ನೀಡಿದ ದೇಶದ ಎಲ್ಲಾ ನಾಗರಿಕರನ್ನು ಇಂದು ಸ್ಮರಿಸುವ ದಿನ.
ಬ್ರಿಟಿಷರು ನಿರ್ಗಮಿಸಿದ್ರೆ ದೇಶವು ಅಭೂತಪೂರ್ವ ಬಿಕ್ಕಟ್ಟುಗಳನ್ನು ಎದುರಿಸಲಿದೆ ಎಂಬ ಆತಂಕವನ್ನು ಭಾರತದ ಸ್ವಾತಂತ್ರ್ಯದ ಬಗ್ಗೆ ಸೃಷ್ಟಿಸಲಾಗಿದ್ದರೂ, ಭಾರತಕ್ಕೆ ಅಂತರ್ಗತ ಶಕ್ತಿ ಇದೆ ಎಂದು ಆಗ ಜಗತ್ತಿಗೆ ತಿಳಿದಿರಲಿಲ್ಲ. ರಾಷ್ಟ್ರವು ಪ್ರಜಾಪ್ರಭುತ್ವದ ತಾಯಿಯನ್ನು ಉಳಿಸಿಕೊಂಡಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಎಲ್ಲರಿಗೂ ಕೋವಿಡ್ ಲಸಿಕೆ ಕೊಟ್ಟ ಹೆಮ್ಮೆ ಇದೆ:ಕೋವಿಡ್ ಲಸಿಕೆಗಳನ್ನು ತೆಗೆದುಕೊಳ್ಳುವ ಬಗ್ಗೆ ಜಗತ್ತು ಗೊಂದಲದಲ್ಲಿದೆ. ಆದ್ರೆ ಭಾರತವು 200 ಕೋಟಿ ಡೋಸ್‌ಗಳನ್ನು ನೀಡುವ ಸಾಧನೆ ಮಾಡಿದೆ. ಎಂದು ಪ್ರಧಾನಿ ಮೋದಿ ಹೇಳಿದರು. ಭಾರತವು ಮಹತ್ವಾಕಾಂಕ್ಷೆಯ ಸಮಾಜವಾಗಿದ್ದು, ಅಲ್ಲಿ ಬದಲಾವಣೆಗಳು ಸಾಮೂಹಿಕ ಮನೋಭಾವದಿಂದ ನಡೆಸಲ್ಪಡುತ್ತವೆ. ಭಾರತದ ಜನರು ಸಕರಾತ್ಮಕ ಬದಲಾವಣೆಗಳನ್ನು ಬಯಸುತ್ತಾರೆ ಮತ್ತು ಅದಕ್ಕೆ ಕೊಡುಗೆ ನೀಡಲು ಇಚ್ಛಿಸುತ್ತಾರೆ. ಪ್ರತಿ ಸರ್ಕಾರವು ಈ ಮಹತ್ವಾಕಾಂಕ್ಷೆಯ ಸಮಾಜವನ್ನು ಪರಿಹರಿಸಬೇಕಾಗಿದೆ ಎಂದು ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದರು.
100 ವರ್ಷಗಳ ಸ್ವಾತಂತ್ರ್ಯಕ್ಕಾಗಿ 'ಪಂಚ ಪ್ರಾಣ' ಇಟ್ಟ ಪ್ರಧಾನಿ ನರೇಂದ್ರ ಮೋದಿ:ಸ್ವಾತಂತ್ರ್ಯ ಬಂದು 100 ವರ್ಷ ಪೂರೈಸುವಾಗ ಅಭಿವೃದ್ಧಿ ಹೊಂದಿದ ದೇಶವಾಗಲಿದೆ ಎಂಬ ಪ್ರತಿಜ್ಞೆಯನ್ನು ಈಗಿನಿಂದಲೇ ತೆಗೆದುಕೊಳ್ಳುವಂತೆ ಯುವ ಜನತೆಗೆ ಪ್ರಧಾನಿ ಮೋದಿ ಮನವಿ ಮಾಡಿದರು.