ಕೊಲ್ಲಂ:ಕೇರಳದ ಶಿಕ್ಷಣ ಸಂಸ್ಥೆಯಲ್ಲಿ ಮೊನ್ನೆಯಿಂದ ಆರಂಭವಾಗಿರುವ ನೀಟ್ ಪರೀಕ್ಷೆ ಕರ್ತವ್ಯದಲ್ಲಿದ್ದ ಐವರು ಮಹಿಳೆಯರನ್ನು ಕೊಲ್ಲಂ ಪೊಲೀಸರು ಬಂಧಿಸಿದ್ದಾರೆ. ನೀಟ್ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿನಿಯರ ಒಳ ಉಡುಪು ತೆಗೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲ್ಲಂ ಪೊಲೀಸರು ಈ ಐವರು ಸಿಬ್ಬಂದಿಯನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ವಿದ್ಯಾರ್ಥಿನಿಯರ ದೂರು ಸ್ವೀಕರಿಸಿ, ಪರೀಕ್ಷಾ ಕೇಂದ್ರದ ಮಹಿಳಾ ಸಿಬ್ಬಂದಿಯನ್ನು ಹಲವು ಗಂಟೆಗಳ ಕಾಲ ಸುದೀರ್ಘ ವಿಚಾರಣೆಗೆ ಒಳಪಡಿಸಿದರು.
ವಿಚಾರಣೆ ಬಳಿಕ ಐವರು ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಮೂವರು ಮಹಿಳೆಯರು ಎನ್‌ಟಿಎಯಿಂದ ನೇಮಕಗೊಂಡ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದರೆ, ಇಬ್ಬರು ಘಟನೆ ನಡೆದ ಆಯುರ್‌ನಲ್ಲಿರುವ ಮಾರ್ ಥೋಮಾ ಇನ್‌ಫರ್ಮೇಷನ್ ಟೆಕ್ನಾಲಜಿಯ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಸತ್ಯ ಶೋಧನಾ ಸಮಿತಿ ರಚಿಸಿದ ಎನ್‌ಟಿಎ:ಮತ್ತೊಂದೆಡೆ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಕೂಡ ಪ್ರಕರಣದ ಸತ್ಯಾಂಶವನ್ನು ಕಂಡುಹಿಡಿಯಲು ಸತ್ಯಶೋಧನಾ ಸಮಿತಿಯನ್ನು ರಚಿಸಿದೆ.
ಜುಲೈ 17 ರಂದು NEET UG 2022 - ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿನಿಯರ ಒಳ ಉಡುಪು ತೆಗೆಯಲು ತಪಾಸಣಾ ಸಿಬ್ಬಂದಿ ಹೇಳಿತ್ತು. ಇದು ಭಾರಿ ವಿವಾದಕ್ಕೂ ಕಾರಣವಾಗಿದೆ. ರಾಜಸ್ಥಾನ ಮತ್ತು ಮಹಾರಾಷ್ಟ್ರದಲ್ಲೂ ಹಿಜಾಬ್ ಧರಿಸಲು ಅವಕಾಶ ನೀಡಲಾಗಿರಲಿಲ್ಲ. ಆದರೆ ಕೇರಳದಲ್ಲಿ ಒಳ ಉಡುಪು ತೆಗೆಸಿದ್ದು ಸದ್ದು ಮಾಡಿತ್ತು.
ಒಳ ಉಡುಪು ತೆಗೆಸುವಂತೆ ನಿರ್ದೇಶನ ನೀಡಿಲ್ಲ ಎಂದ ಎನ್‌ಟಿಎ:ಈ ಬಗ್ಗೆ ಸ್ಪಷ್ಟನೆ ನೀಡಿರುವ ಎನ್‌ಟಿಎ, ಕೇರಳದ ಕೊಲ್ಲಂ ಜಿಲ್ಲೆಯ NEET UG ಕೇಂದ್ರವೊಂದರಲ್ಲಿಈ ಘಟನೆ ನಡೆದಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆ ಬಳಿಕವೇ ಈ ವಿಚಾರ ಗಮನಕ್ಕೆ ಬಂದಿದೆ. ಹೀಗಾಗಿ ಪ್ರಕರಣದ ತನಿಖೆಗೆ ಆದೇಶ ನೀಡಲಾಗಿದೆ ಎಂದು ಸಂಸ್ಥೆ ಸ್ಪಷ್ಟನೆ ನೀಡಿದೆ. ಇದೇ ವೇಳೆ, ಪ್ರಕರಣದ ಬಗ್ಗೆ ಯಾವುದೇ ದೂರು ಬಂದಿಲ್ಲ ಎಂದು ಎನ್‌ಟಿಎ ಹೇಳಿದೆ.
ಇದನ್ನು ಓದಿ:ನೀಟ್ ಪರೀಕ್ಷಾ ಕೇಂದ್ರದಲ್ಲಿ ತೆಗೆಸಿದ ಒಳಒಡುಪು ಧರಿಸದಂತೆಯೂ ಹೇಳಿದ್ದರು: ಕೇರಳದ ವಿದ್ಯಾರ್ಥಿನಿ ಅಳಲು