ಅಗರ್ತಲಾ (ತ್ರಿಪುರಾ):ತ್ರಿಪುರಾ ವಿಧಾನಸಭೆ ಕಲಾಪದಲ್ಲಿ ಇಂದು ಆಡಳಿತಾರೂಢ ಬಿಜೆಪಿ ಮತ್ತು ತಿಪ್ರಾ ಮೋಥಾ ಪಕ್ಷ ಸೇರಿ ಪ್ರತಿಪಕ್ಷದ ಶಾಸಕರ ನಡುವೆ ವಾಗ್ವಾದ ನಡೆದಿದೆ. ಸದನದ ಬಾವಿಗೆ ಇಳಿದು ತಳ್ಳಾಟ, ನೂಕಾಟ ಉಂಟು ಮಾಡಿ ಶಾಸಕರು ರಣಾಂಗಣವನ್ನೇ ಸೃಷ್ಟಿಸಿದ್ದಾರೆ. ಹೀಗಾಗಿ ಐವರು ಶಾಸಕರನ್ನು ಸ್ಪೀಕರ್ ಒಂದು ದಿನದ ಮಟ್ಟಿಗೆ ಕಲಾಪದಿಂದ ಅಮಾನತುಗೊಳಿಸಿದ್ದಾರೆ.
ಇಂದು ಬೆಳಗ್ಗೆ ಕಲಾಪದಲ್ಲಿ ಪ್ರತಿಪಕ್ಷದ ನಾಯಕ ಅನಿಮೇಶ್ ದೆಬ್ಬರ್ಮಾ ಅವರು ಬಾಗ್ಬಾಶಾ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕ ಜದಾವ್ಲಾಲ್ ನಾಥ್ ಇತ್ತೀಚಿಗೆ ಸದನದಲ್ಲೇ ಅಶ್ಲೀಲ ಚಿತ್ರ ವೀಕ್ಷಣೆ ವಿಷಯದ ಬಗ್ಗೆ ಪ್ರಶ್ನೆಯನ್ನು ಎತ್ತಿದರು. ಆದರೆ, ಈ ಬಗ್ಗೆ ಚರ್ಚೆಗೆ ಅವಕಾಶ ನೀಡದ ಸ್ಪೀಕರ್, ಕೆಲ ಪ್ರಮುಖ ವಿಷಯಗಳ ಚರ್ಚೆ ನಂತರ ತಮ್ಮ ಬಳಿಗೆ ಹಿಂತಿರುಗಿ ಎಂದು ಸೂಚಿಸಿದರು. ಇದರಿಂದ ಪ್ರತಿಪಕ್ಷಗಳ ಶಾಸಕರು ಘೋಷಣೆಗಳನ್ನು ಕೂಗಲು ಆರಂಭಿಸಿದರು.
ಅಲ್ಲದೇ, ಸದನದ ಬಾವಿಗೆ ಇಳಿದು ಶಾಸಕರು ಗದ್ದಲ ಸೃಷ್ಟಿಸಿದರು. ಮಹಿಳಾ ಶಾಸಕರು ಸೇರಿ ಮೇಜುಗಳನ್ನು ಕುಟುತ್ತಾ ಹಾಗೂ ಮೇಜುಗಳ ಮೇಲೆ ಹತ್ತಿ ಕೋಲಾಹಲ ಉಂಟು ಮಾಡಿದರು. ಹೀಗಾಗಿ ಇಡೀ ಕಲಾಪವು ಗೊಂದಲದ ಗೂಡಾಗಿ ರಣಾಂಗಣವಾಗಿ ಮಾರ್ಪಟ್ಟಿತು. ಅಷ್ಟೇ ಅಲ್ಲ, ಸ್ಪೀಕರ್ ಪೀಠದತ್ತ ಕೂಡ ಶಾಸಕರು ನುಗ್ಗಲು ಯತ್ನಿಸಿದರು. ಈ ವೇಳೆ, ವಿಧಾನಸಭೆಯ ಸಿಬ್ಬಂದಿ ಸ್ಪೀಕರ್ ಪೀಠದ ಬಳಿ ಭದ್ರತಾ ಕಲ್ಪಿಸಿ ಪೀಠದತ್ತ ತೆರಳದಂತೆ ತಡೆದರು.