ಲಖನೌ(ಉತ್ತರ ಪ್ರದೇಶ):ತೀವ್ರ ಕುತೂಹಲ ಮೂಡಿಸಿದ್ದ ಉತ್ತರ ಪ್ರದೇಶದಲ್ಲಿ ಆಡಳಿತರೂಢ ಭಾರತೀಯ ಜನತಾ ಪಾರ್ಟಿ ಅತಿ ಹೆಚ್ಚಿನ ಸ್ಥಾನಗಳಲ್ಲಿ ಮುನ್ನಡೆ ಪಡೆದುಕೊಂಡಿದೆ. ಈ ಮೂಲಕ ಮತ್ತೊಂದು ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವತ್ತ ದಾಪುಗಾಲು ಇಟ್ಟಿದೆ. ಆದರೆ, ಹತ್ತಾರು ಭರವಸೆ ನೀಡಿ ಅಧಿಕಾರ ಪಡೆಯುವ ಕನಸು ಕಂಡಿದ್ದ ಕಾಂಗ್ರೆಸ್ಗೆ ತೀವ್ರ ಮುಖಭಂಗವಾಗಿದೆ.
ಉತ್ತರ ಪ್ರದೇಶದಲ್ಲಿ ಅಧಿಕಾರ ಪಡೆದುಕೊಳ್ಳುವ ಉದ್ದೇಶದಿಂದ ಚುನಾವಣಾ ಪ್ರಣಾಳಿಕೆಯಲ್ಲಿ ಅನೇಕ ರೀತಿಯ ಭರವಸೆ ನೀಡಿದ್ದ ಪ್ರಿಯಾಂಕಾ ಗಾಂಧಿ ಹಾಗೂ ಕಾಂಗ್ರೆಸ್ಗೆ ತೀವ್ರ ನಿರಾಸೆಯಾಗಿದೆ. 403 ಕ್ಷೇತ್ರಗಳ ವಿಧಾನಸಭೆಯಲ್ಲಿ ಇಲ್ಲಿಯವರೆಗಿನ ಮಾಹಿತಿ ಪ್ರಕಾರ ಕೇವಲ 5 ಸ್ಥಾನಗಳಲ್ಲಿ ಮುನ್ನಡೆ ಪಡೆದುಕೊಂಡಿದೆ.
ಉತ್ತರ ಪ್ರದೇಶದಲ್ಲಿ ಸುಮಾರು 500ಕ್ಕೂ ಅಧಿಕ ಸಭೆ, ವಿಡಿಯೋ ಕಾನ್ಪರೆನ್ಸ್, ರ‍್ಯಾಲಿ ಹಾಗೂ ರೋಡ್ ಶೋಗಳಲ್ಲಿ ಭಾಗಿಯಾಗಿದ್ದ ಪ್ರಿಯಾಂಕಾ ಗಾಂಧಿ, ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿದ್ದರು. ಜೊತೆಗೆ ಅಭ್ಯರ್ಥಿಗಳ ಪಟ್ಟಿಯಲ್ಲಿ ಶೇ. 50ಕ್ಕೂ ಹೆಚ್ಚಿನ ಮಹಿಳೆಯರಿಗೆ ಮಣೆ ಹಾಕಿ ಟಿಕೆಟ್ ನೀಡಿತ್ತು. ಆದರೆ, ಅವರು ತೆಗೆದುಕೊಂಡಿದ್ದ ನಿರ್ಧಾರ ಯಶಸ್ಸು ನೀಡಿಲ್ಲ. ಹೀಗಾಗಿ ಯುಪಿಯಲ್ಲಿ ಸಂಪೂರ್ಣವಾಗಿ ಕಾಂಗ್ರೆಸ್ ನೆಲಕಚ್ಚಿದೆ.