ಗುಂಟೂರು(ಆಂಧ್ರಪ್ರದೇಶ):ಜಿಲ್ಲೆಯ ಅಚ್ಚಂಪೇಟ ಮಂಡಲದ ಮಡಿಪಾಡು ಸಮೀಪ ಕೃಷ್ಣಾ ನದಿಯಲ್ಲಿ ದುರಂತ ಸಂಭವಿಸಿದೆ. ನದಿಗೆ ಸ್ನಾನಕ್ಕೆ ತೆರಳಿದ್ದ ಮಡಿಪಾಡು ಗ್ರಾಮದ ಶ್ವೇತಾ ಶೃಂಗಾಚಲಂ ವೇದಾಂತ ಗುರುಕುಲ ವೇದ ಶಾಲೆಯ ಐವರು ವಿದ್ಯಾರ್ಥಿಗಳು ಹಾಗೂ ಶಿಕ್ಷಕ(ಗುರೂಜಿ) ನೀರುಪಾಲಾಗಿದ್ದಾರೆ.
ನದಿ ದಡಕ್ಕೆ 8 ಮಂದಿ ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು ತೆರಳಿದ್ದರು. ಅವರಲ್ಲಿ 7 ಮಂದಿ ಸ್ನಾನಕ್ಕೆ ಇಳಿದಿದ್ದು, ಈಜಲು ಬಾರದೆ ನೀರಿನಲ್ಲಿ ಮುಳುಗಿ 6 ಜನರು ಮೃತಪಟ್ಟಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಸ್ಥಳೀಯರು, ಪೊಲೀಸರು ಹಾಗೂ ಈಜುಗಾರರ ತಂಡವು ಶೋಧ ಕಾರ್ಯ ನಡೆಸಿ ಆರು ಮಂದಿಯ ಶವಗಳನ್ನು ನದಿಯಿಂದ ಮೇಲಕ್ಕೆತ್ತಿದ್ದಾರೆ.
ಈ ಬಗ್ಗೆ ಮಾತನಾಡಿದ ಸತ್ತೇನಪಲ್ಲಿ ಪೊಲೀಸ್ ಉಪಾಧೀಕ್ಷಕ ವಿಜಯ ಭಾಸ್ಕರ್ ರೆಡ್ಡಿ, ಶುಕ್ರವಾರ ಸಂಜೆ 5 ಗಂಟೆ ಸುಮಾರಿಗೆ ವೇದ ವೇದಾಂತ ಗುರುಕುಲ ಮಹಾವಿದ್ಯಾಲಯದ 8 ವಿದ್ಯಾರ್ಥಿಗಳೊಂದಿಗೆ ಗುರೂಜಿ ಕೃಷ್ಣಾ ನದಿಗೆ ಸ್ನಾನಕ್ಕೆ ತೆರಳಿದ್ದರು. ಗುರೂಜಿ ಮತ್ತು ಆರು ವಿದ್ಯಾರ್ಥಿಗಳು ಮಾತ್ರ ನದಿಗೆ ಇಳಿದಿದ್ದರು. ಸ್ನಾನ ಮಾಡುವಾಗ ಆಕಸ್ಮಿಕವಾಗಿ ನದಿಯ ಆಳಕ್ಕೆ ಜಾರಿದ್ದಾರೆ. ಆಗ ಈಜು ಬಾರದ್ದರಿಂದ ನೀರಿನಲ್ಲಿ ಮುಳುಗಿ ಐವರು ವಿದ್ಯಾರ್ಥಿಗಳು ಹಾಗೂ ಗುರೂಜಿ ಮೃತಪಟ್ಟಿದ್ದಾರೆ. ಈಜು ಬಲ್ಲ ಓರ್ವ ವಿದ್ಯಾರ್ಥಿ ಬದುಕುಳಿದಿದ್ದು, ನದಿ ದಡದಲ್ಲೇ ಕುಳಿತಿದ್ದ ಉಳಿದ ಇಬ್ಬರು ವಿದ್ಯಾರ್ಥಿಗಳು ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ ಎಂದು ಹೇಳಿದರು.