ನವದೆಹಲಿ:ದೆಹಲಿಯ ತಿಹಾರ್ ಜೈಲಿನಿಂದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. 5 ಕೈದಿಗಳು ಹರಿತವಾದ ಆಯುಧಗಳಿಂದ ತಮ್ಮನ್ನು ತಾವೇ ಗಾಯಗೊಳಿಸಿಕೊಂಡು ಬಳಿಕ ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜೈಲು ಸಂಖ್ಯೆ 3 ರಲ್ಲಿ ನಡೆದಿದೆ.
ತಿಹಾರ್ ಜೈಲಿನಲ್ಲಿ ಐವರು ಕೈದಿಗಳು ಸಾಮೂಹಿಕ ಆತ್ಮಹತ್ಯೆಗೆ ಯತ್ನ ಮಾಹಿತಿ ಪ್ರಕಾರ, ಜನವರಿ 3 ರಂದು ತಿಹಾರ್ ಜೈಲಿನಲ್ಲಿ ಈ ಘಟನೆ ನಡೆದಿದೆ. ಮೂರನೇ ಜೈಲಿನಲ್ಲಿದ್ದ ಐವರು ಕೈದಿಗಳು ಒಟ್ಟಾಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮೊದಲು ಹರಿತವಾದ ಆಯುಧದಿಂದ ಗಾಯ ಮಾಡಿಕೊಂಡು ತಮ್ಮ ವಾರ್ಡ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಓದಿ:ಹೆಂಡತಿಗೆ ವಾರಕ್ಕೊಮ್ಮೆ ಹೋಟೆಲ್ ಊಟ ತಿನ್ನುವ ಆಸೆ: ಕೊಡಿಸದ ಗಂಡ, 2 ಮಕ್ಕಳ ಜೊತೆ ಆತ್ಮಹತ್ಯೆಗೆ ಶರಣಾದ ಪತ್ನಿ
ಇದನ್ನು ತಕ್ಷಣ ಅಲ್ಲಿದ್ದ ಸಿಬ್ಬಂದಿ ಗಮನಿಸಿ ಗಲಾಟೆ ಮಾಡುತ್ತಿದ್ದ ಕೈದಿಗಳನ್ನು ಹಿಡಿದಿದ್ದಾರೆ. ಈ ಘಟನೆಯಲ್ಲಿ ಗಾಯಗೊಂಡ ಕೈದಿಗಳನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲೊಬ್ಬ ಕೈದಿಯ ಸ್ಥಿತಿ ಗಂಭೀರವಾಗಿರುವುದರಿಂದ ದೀನದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಏಕಕಾಲಕ್ಕೆ ಐವರು ಕೈದಿಗಳು ಆತ್ಮಹತ್ಯೆಗೆ ಯತ್ನಿಸಿರುವುದು ಜೈಲು ಆಡಳಿತಕ್ಕೂ ಅಚ್ಚರಿ ಮೂಡಿಸಿದೆ. 5 ಕೈದಿಗಳಿಗೆ ಗಾಯಗಳಾಗಿವೆ. ಸಾಮೂಹಿಕವಾಗಿ ಆತ್ಮಹತ್ಯೆಗೆ ಯತ್ನಿಸಿರುವ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ತಿಹಾರ್ ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.