ಮಧುರೈ, ತಮಿಳುನಾಡು: ಮೀನಾಚಿ ಅಮ್ಮನ ದೇವಸ್ಥಾನದ ವಾರ್ಷಿಕ ಚಿತ್ತಿರೈ ಉತ್ಸವದ ನಿಮಿತ್ತ ನಿನ್ನೆ ಕಲ್ಲಜಗರ್ ದೇವರ ವೈಗೈ ನದಿ ಪ್ರವೇಶ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು. ಮಧುರೈ ನಗರ ಮಾತ್ರವಲ್ಲದೇ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಜನ ಭಕ್ತರು ಚಿತ್ತಿರೈ ಉತ್ಸವ ವೀಕ್ಷಿಸಲು ಆಗಮಿಸಿದ್ದರು. ಈ ವೇಳೆ, ದುರಾದೃಷ್ಟ ಎಂಬಂತೆ ಕಾಲ್ತುಳಿತದಲ್ಲಿ ಐವರು ಸಾವನ್ನಪ್ಪಿದ್ದಾರೆ.
ಹೌದು, ಮಧುರೈನಿಂದ 21 ಕಿ. ಮೀ ದೂರದಲ್ಲಿರುವ ಕಲ್ಲಜಗರ್ ದೇವಸ್ಥಾನದ ಪ್ರಧಾನ ದೇವತೆಯಾದ ಕಲ್ಲಜಗರ್ ದೇವರ ವಿಗ್ರಹಕ್ಕೆ ಹಸಿರು ಬಟ್ಟೆ ಹೊದಿಸಲಾಗಿತ್ತು. ಇದು ಮುಂಬರುವ ವರ್ಷದಲ್ಲಿ ಸಮೃದ್ಧಿಯನ್ನು ಸೂಚಿಸುತ್ತದೆ. ಜೊತೆಗೆ, ಪೊಲೀಸ್ ಇಲಾಖೆ, ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಆಡಳಿತ ವಿವಿಧ ವ್ಯವಸ್ಥೆ ಮಾಡಿತ್ತು. ಅಲ್ಲದೇ, ಕಲ್ಲಜಗರ ದರ್ಶನಕ್ಕೆಂದು ಆಗಮಿಸಿದ ಭಕ್ತರು ಉತ್ಸಾಹದಿಂದ ವೈಗೈ ನದಿಗೆ ಇಳಿಯುವ ಮೂಲಕ ದೇವರ ಕೃಪೆಗೆ ಪಾತ್ರರಾದರು.
ಇದನ್ನೂ ಓದಿ :ಕಾಲ್ತುಳಿತಕ್ಕೆ ಮೂವರು ಸಾವು, ಹಲವರಿಗೆ ಗಂಭೀರ ಗಾಯ.. ಶಿವನ ಪೂಜೆ ವೇಳೆ ದುರಂತ
ಈ ಬೆನ್ನಲ್ಲೇ ಆಳ್ವಾರಪುರಂ ಪ್ರದೇಶದ ಬ್ಯಾರೇಜ್ ಬಳಿ ( 40 ) ವರ್ಷದ ವ್ಯಕ್ತಿಯ ಮೃತ ದೇಹ ಪತ್ತೆಯಾಗಿದ್ದು, ಇದನ್ನು ಪೊಲೀಸರು ವಶಪಡಿಸಿಕೊಂಡರು. ಇದಾದ ಬಳಿಕ, ವೈಗೈ ನದಿಯ ಕಲ್ಪಾಲಂ ಪ್ರದೇಶದಲ್ಲಿ 2 ಮೃತದೇಹಗಳು ತೇಲುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದ್ದು, ಬಳಿಕ ಅಗ್ನಿಶಾಮಕ ದಳದ ನೆರವಿನಿಂದ ಇಬ್ಬರ ಮೃತದೇಹಗಳನ್ನು ಹೊರ ತೆಗೆಯಲಾಯಿತು. ಮೃತರಲ್ಲಿ ಓರ್ವರು ಮಧುರೈನ ವ್ಲಾಚೇರಿ ಜೋಸೆಫ್ ನಗರದ ಪ್ರೇಮಕುಮಾರ್ (18) ಎಂದು ತಿಳಿದು ಬಂದಿದೆ. ಉಳಿದಿಬ್ಬರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಮೂವರ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮಧುರೈ ಸರ್ಕಾರಿ ರಾಜಾಜಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.