ಗುವಾಹಟಿ (ಅಸ್ಸೋಂ): ವಿವಿಧ ಸೇವಾ ಪೂರೈಕೆದಾರರಿಂದ ವಂಚನೆಯಿಂದ ಸಿಮ್ ಕಾರ್ಡ್‌ಗಳನ್ನು ಪಡೆದುಕೊಂಡು ಕೆಲವು ಪಾಕಿಸ್ತಾನಿ ಏಜೆಂಟರಿಗೆ ಸರಬರಾಜು ಮಾಡುತ್ತಿದ್ದ ಆರೋಪದ ಮೇಲೆ ಐವರನ್ನು ಅಸ್ಸೋಂ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಆಶಿಕುಲ್ ಇಸ್ಲಾಂ, ಬೋಡೋರ್ ಉದ್ದೀನ್, ಮಿಜಾನುರ್ ರೆಹಮಾನ್, ವಹಿದುಜ್ ಜಮಾನ್ ಮತ್ತು ಬಹರುಲ್ ಇಸ್ಲಾಂ ಎಂದು ಗುರುತಿಸಲಾಗಿದೆ.
ಈ ಐವರು ಮಧ್ಯ ಅಸ್ಸೋಂನ ನಾಗಾಂವ್ ಮತ್ತು ಮೊರಿಗಾಂವ್ ಜಿಲ್ಲೆಗಳಿಗೆ ಸೇರಿದವರು ಎಂಬುದಾಗಿ ತಿಳಿದು ಬಂದಿದೆ. ಅವರ ಬಳಿಯಿದ್ದ 18 ಮೊಬೈಲ್ ಫೋನ್‌ಗಳು, 136 ಸಿಮ್ ಕಾರ್ಡ್‌ಗಳು ಮತ್ತು ಇತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೇಂದ್ರ ಏಜೆನ್ಸಿಯ ಮಾಹಿತಿ ಆಧಾರದ ಮೇಲೆ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ ಎಂದು ಐಜಿಪಿ ಪ್ರಶಾಂತ್ ಕುಮಾರ್ ಭುಯಾನ್ (ಎಲ್ & ಒ) ಮತ್ತು ಅಸ್ಸೋಂ ಪೊಲೀಸ್ ವಕ್ತಾರರು ಎಎನ್‌ಐಗೆ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಐವರ ಬಂಧನ: "ಕೇಂದ್ರ ಏಜೆನ್ಸಿಯ ಇನ್‌ಪುಟ್‌ಗಳು ಮತ್ತು ವಿಶ್ವಾಸಾರ್ಹ ಮೂಲಗಳ ಪ್ರಕಾರ, ನಾಗಾವ್ ಮತ್ತು ಮೊರಿಗಾಂವ್ ಜಿಲ್ಲೆಗಳ ಸುಮಾರು 10 ಜನರು ವಿವಿಧ ಸೇವಾ ಪೂರೈಕೆದಾರರಿಂದ ಸಿಮ್ ಕಾರ್ಡ್‌ಗಳನ್ನು ವಂಚನೆಯಿಂದ ಪಡೆದುಕೊಳ್ಳುವಲ್ಲಿ ತೊಡಗಿಸಿಕೊಂಡಿದ್ದಾರೆ. ನಂತರ ಅವರು ಪಾಕಿಸ್ತಾನಿ ಏಜೆಂಟರಿಗೆ ಅವುಗಳನ್ನು ಪೂರೈಸುತ್ತಿದ್ದಾರೆ ಎಂಬುದು ತಿಳಿದು ಬಂದಿದೆ. ರಾಷ್ಟ್ರದ ಸಮಗ್ರತೆ ಮತ್ತು ಸಾರ್ವಭೌಮತ್ವ ಕಾಪಾಡುವ ದೃಷ್ಟಿಯಿಂದ ನಿನ್ನೆ ರಾತ್ರಿ ಹೆಚ್ಚುವರಿ ಎಸ್ಪಿ (ಅಪರಾಧ), SDPO ಕಲಿಯಾಬೋರ್ ಮತ್ತು ನಾಗಾಂವ್ ಜಿಲ್ಲೆಯ ಹಲವಾರು ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಕೊನೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ' ಎಂದು ಪ್ರಶಾಂತ ಕುಮಾರ್ ಭುಯಾನ್ ಹೇಳಿದರು.