ಬಾರ್ಮರ್ (ರಾಜಸ್ಥಾನ) :ಇಲ್ಲಿನ ಬಾರ್ಮರ್ ಜಿಲ್ಲೆಯಲ್ಲಿ ಸೋಮವಾರ ಸಂಜೆ ಟ್ರಕ್ ಮತ್ತು ಅವರ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಆರು ಮಂದಿ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.
ಮಹಾರಾಷ್ಟ್ರ ಮೂಲದ ಧನರಾಜ್ (45), ಸ್ವರಾಂಜಲಿ (5), ಪ್ರಶಾಂತ್ (5), ಭಾಗ್ಯಲಕ್ಷ್ಮಿ (1), ಗಾಯತ್ರಿ (26) ದುರಂತದಲ್ಲಿ ಮೃತಪಟ್ಟವರು. ದೀಪಾವಳಿ ರಜೆಯ ಹಿನ್ನೆಲೆ ಕುಟುಂಬಸ್ಥರು ಸೇರಿಕೊಂಡು ಜೈಸಲ್ಮೇರ್‌ಗೆ ಭೇಟಿ ನೀಡಲು ತೆರಳುತ್ತಿದ್ದರು. ಈ ವೇಳೆ ಬಾರ್ಮರ್ ಜಿಲ್ಲೆಯಲ್ಲಿ ಎದುರಿಗೆ ಬಂದ ಟ್ರಕ್ಗೆ ಕಾರು ರಭಸವಾಗಿ ಡಿಕ್ಕಿ ಹೊಡೆದಿದೆ. ಘರ್ಷಣೆಯಲ್ಲಿ ಕಾರಿನಲ್ಲಿದ್ದ ಮೂವರು ಮಕ್ಕಳು, ದಂಪತಿ ಸ್ಥಳದಲ್ಲೇ ದಾರುಣವಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೊಬ್ಬರು ತೀವ್ರ ಗಾಯಗೊಂಡಿದ್ದು, ಅವರು ಕೊನೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಅಪಘಾತ ಎಷ್ಟು ತೀವ್ರವಾಗಿದೆ ಎಂದರೆ ಕಾರು ಸಂಪೂರ್ಣ ಜಖಂಗೊಂಡಿದೆ. ಅಪಘಾತದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು.
ಪೊಲೀಸ್ ಅಧಿಕಾರಿ ಸುಖರಾಮ್ ಬಿಷ್ಣೋಯ್ ಘಟನೆಯ ಬಗ್ಗೆ ಮಾಹಿತಿ ನೀಡಿದ್ದು, ಸೋಮವಾರ ಸಂಜೆ 4 ಗಂಟೆಯ ಸುಮಾರಿನಲ್ಲಿ ರಾಷ್ಟ್ರೀಯ ಹೆದ್ದಾರಿ 68 ರಲ್ಲಿ ಟ್ರಕ್ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದೆ. ಒಂದೇ ಕುಟುಂಬದ ಆರು ಮಂದಿ ಸಾವನ್ನಪ್ಪಿದ್ದಾರೆ. ಇದರಲ್ಲಿ ಮೂವರು ಮಕ್ಕಳಿದ್ದಾರೆ. ಕಾರಿನಲ್ಲಿದ್ದ ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅವರು ಬದಿಕುಳಿಯಲಿಲ್ಲ. ಡಿಕ್ಕಿಯಾದ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಘಟನೆಯ ಕಾರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದರು.