ಹರ್ದೋಯಿ (ಉತ್ತರಪ್ರದೇಶ):ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ 4 ವರ್ಷದ ಮಗು ಸೇರಿ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಘಟನೆ ಹರ್ದೋಹಿ ಜಿಲ್ಲೆಯ ಬಿಲಹೌರ್ - ಕತ್ರಾ ಹೆದ್ದಾರಿಯಲ್ಲಿ ನಡೆದಿದೆ. ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಇದರಲ್ಲಿ ನಾಲ್ಕು ವರ್ಷದ ಮಗು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಘಟನೆ ಬಗ್ಗೆ ಹರ್ದೋಯಿ ಎಸ್ಪಿ ದುರ್ಗೇಶ್ ಕುಮಾರ್ ಸಿಂಗ್ ಮಾತನಾಡಿ, ನಿನ್ನೆ ರಾತ್ರಿ ಸುಮಾರಿಗೆ ಘಟನೆ ನಡೆದಿದೆ. ಮೃತರೆಲ್ಲರೂ ಪಚ್ದೇವ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಬರಕಾಂತ್ ಗ್ರಾಮದ ನಿವಾಸಿಗಳು ಎಂದು ಗುರುತಿಸಲಾಗಿದೆ. ಘಟನೆ ಬಳಿಕ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಘಟನಾ ಸ್ಥಳಕ್ಕೆ ತೆರಳಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅಪಘಾತ ಸ್ಥಳದಲ್ಲಿ ಕಾರಿನಲ್ಲಿ ಪತ್ತೆಯಾದ ಮೊಬೈಲ್ ಫೋನ್ನ ಸಹಾಯದಿಂದ ಮೃತರನ್ನು ಗುರುತಿಸಲಾಗಿದೆ. ಮುಖೇಶ್, ಅವರ 4 ವರ್ಷದ ಮಗ ಬಲ್ಲು, ಹೊಶಿಯಾರ್, ರಾಜಾರಾಮ್ ಮತ್ತು ಮನೋಜ್ ಘಟನೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಸಿಂಗ್ ತಿಳಿಸಿದ್ದಾರೆ.
ಎರಡೂ ಟ್ರಕ್ಗಳ ನಡುವೆ ಡಿಕ್ಕಿ:ರಾಜಸ್ಥಾನದ ಸಿರೋಹಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿಎರಡು ಟ್ರಕ್ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಸಜೀವದಹನವಾಗಿರುವ ಘಟನೆ ಭಾನುವಾರ ರಾತ್ರಿ ನಡೆದಿತ್ತು. ಡಿಕ್ಕಿಯ ರಭಸಕ್ಕೆ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಂಡು ಡ್ರೈವರ್ ಮತ್ತು ಕ್ಲೀನರ್ ಸಜೀವದಹನ ವಾಗಿದ್ದರು. ಮೃತರನ್ನು ರಾಜಸ್ಥಾನದ ಭರತ್ಪುರ ಜಿಲ್ಲೆಯ ನಿವಾಸಿಗಳು ಎಂದು ಗುರುತಿಸಲಾಗಿತ್ತು.