ಕಣ್ಣೂರು (ಕೇರಳ):ಕೇರಳದ ಕಣ್ಣೂರು ಜಿಲ್ಲೆಯಲ್ಲಿ ದಾರುಣ ಘಟನೆಯೊಂದು ಬೆಳಕಿಗೆ ಬಂದಿದೆ. ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ. ಇನ್ನೊಂದೆಡೆ, ಉತ್ತರ ಪ್ರದೇಶದಲ್ಲಿ ಸಿಲಿಂಡರ್ ಸ್ಫೋಟಗೊಂಡು ಬಾಲಕಿ ಸಜೀವ ದಹನವಾದರೆ, ಐವರು ಸುಟ್ಟ ಗಾಯಕ್ಕೀಡಾಗಿದ್ದಾರೆ. ಈ ಬಗ್ಗೆ ಪೊಲೀಸ್ ತನಿಖೆಗಳು ನಡೆಯುತ್ತಿವೆ.
ಮಕ್ಕಳ ಕೊಂದು ದಂಪತಿ ಆತ್ಮಹತ್ಯೆ:ಕೇರಳದ ಕಣ್ಣೂರು ಜಿಲ್ಲೆಯ ಚೆರುಪುಳದಲ್ಲಿ ಮೂವರು ಮಕ್ಕಳನ್ನು ದಂಪತಿ ಕೊಂದು ಬಳಿಕ ಅವರೂ ಆತ್ಮಹತ್ಯೆ ಮಾಡಿಕೊಂಡ ದುರಂತ ಸಂಭವಿಸಿದೆ. ಮೃತ ಮಕ್ಕಳನ್ನು ಸೂರಜ್, ಸುರಭಿ ಮತ್ತು ಸುಬಿತ್ ಎಂದು ಗುರುತಿಸಲಾಗಿದೆ. ಮೂರು ಮಕ್ಕಳ ಶವಗಳು ಮನೆಯ ಮೆಟ್ಟಿಲುಗಳ ಬಳಿ ಇಂದು ಬೆಳಗ್ಗೆ ಪತ್ತೆಯಾಗಿವೆ. ಶ್ರೀಜಾ ಮತ್ತು ಶಾಜಿ ಎಂಬ ದಂಪತಿ ತಮ್ಮ ಮೂವರು ಮಕ್ಕಳನ್ನು ಕೊಂದು ಬಳಿಕ ಅವರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.
ಮಕ್ಕಳ ಶವಗಳು ಹೊರಭಾಗದಲ್ಲಿ ಸಿಕ್ಕ ಬಳಿಕ ಪೊಲೀಸರು ಮನೆಯನ್ನು ತೆರೆಯಲು ಪ್ರಯತ್ನಿಸಿದ್ದಾರೆ. ಆದರೆ, ಒಳಗಿನಿಂದ ಬೀಗ ಹಾಕಲಾಗಿತ್ತು. ಪೊಲೀಸರು ಬಾಗಿಲು ಮುರಿದು ಒಳಪ್ರವೇಶಿಸಿದ್ದು, ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದು ಕಂಡುಬಂದಿದೆ.
2 ವಾರಗಳ ಹಿಂದಷ್ಟೇ ಮದುವೆಯಾಗಿದ್ದ ಜೋಡಿ:ಮೃತಪಟ್ಟ ಶ್ರೀಜಾ ಮತ್ತು ಶಾಜಿ ದಂಪತಿ ಎರಡು ವಾರಗಳ ಹಿಂದಷ್ಟೇ ಮದುವೆಯಾಗಿದ್ದರು. ಇಬ್ಬರಿಗೂ ಇದು ಎರಡನೇ ಮದುವೆ. ಮಕ್ಕಳಾದ ಸೂರಜ್, ಸುರಭಿ ಮತ್ತು ಸುಬಿತ್ ಶ್ರೀಜಾ ಅವರ ಮೊದಲ ಗಂಡನ ಮಕ್ಕಳಾಗಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದಿಲ್ಲವಾದರೂ, ಕುಟುಂಬ ಕಲಹ ಇದಕ್ಕೆ ಕಾರಣವಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.
ಸಿಲಿಂಡರ್ ಸ್ಫೋಟ ದುರಂತ:ಇನ್ನೊಂದೆಡೆ, ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ಮನೆಯೊಂದರಲ್ಲಿ ಎಲ್‌ಪಿಜಿ ಸಿಲಿಂಡರ್ ಸ್ಫೋಟಗೊಂಡು ಬಾಲಕಿ ಸಜೀವ ದಹನಗೊಂಡರೆ, ಕುಟುಂಬದ ಐವರು ತೀವ್ರ ಗಾಯಗೊಂಡ ಘಟನೆ ನಡೆದಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆಯಲ್ಲಿನ ಗೃಹೋಪಯೋಗಿ ವಸ್ತುಗಳು ಬೆಂಕಿಯಲ್ಲಿ ಸುಟ್ಟು ಭಸ್ಮವಾಗಿವೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಟ್ಟು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇಂದು ಬೆಳಗ್ಗೆ ಮನೆಯಲ್ಲಿ ಅಡುಗೆ ಮಾಡುತ್ತಿದ್ದ ವೇಳೆ, ಈ ವೇಳೆ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದೆ. ನೋಡ ನೋಡುತ್ತಿದ್ದಂತೆ ಬೆಂಕಿ ಇಡೀ ಮನೆಗೆ ಆವರಿಸಿದೆ. ಕುಟುಂಬದ ಸದಸ್ಯರು ಹೊರಬರಲಾಗದೇ ಮನೆಯೊಳಗೆ ಸಿಲುಕಿಕೊಂಡಿದ್ದಾರೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಸ್ಥಳೀಯರ ನೆರವಿನಿಂದ ಗೋಡೆ ಕೆಡವಿ ಮನೆಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬಾಲಕಿ ಸಜೀವದಹನ:ಮನೆಯೊಳಗೆ ಬಾಲಕಿ ಸೇರಿ 6 ಮಂದಿ ಸಿಲುಕಿದ್ದರು. 12 ವರ್ಷದ ಬಾಲಕಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ದಹನವಾಗಿದ್ದಳು. ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಚಿಕಿತ್ಸೆಗೆ ದಾಖಲಾದ ಐವರಲ್ಲಿ, ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ರಾಮಗಢ ಪೊಲೀಸ್ ಠಾಣೆ ವ್ಯಾಪ್ತಿಯ ಮೊಮಿನ್ ನಗರದಲ್ಲಿರುವ ಇಸ್ರಾರ್ ಎಂಬುವರ ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡು ಬೆಂಕಿ ಕಾಣಿಸಿಕೊಂಡಿದೆ. ಪೊಲೀಸರ ಅವಿರತ ಪ್ರಯತ್ನದಿಂದ ಕುಟುಂಬಸ್ಥರನ್ನೆಲ್ಲ ಹೊರ ತೆಗೆದು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಬಾಲಕಿ ಸಾವನ್ನಪ್ಪಿದ್ದು, ಘಟನೆಗೆ ಕಾರಣ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಕ್ಯಾನ್ಸರ್ನಿಂದಾಗುವ ಸಾವಿನ ಅಪಾಯ ಕಡಿಮೆ ಮಾಡುತ್ತೆ ವಿಟಮಿನ್ ಡಿ