ಮಧುರೈ (ತಮಿಳುನಾಡು): ಪಟಾಕಿ ತಯಾರಿಕಾ ಘಟಕದಲ್ಲಿ ಭಾರಿ ಸ್ಫೋಟ ಸಂಭವಿಸಿ ಐವರು ಸಾವನ್ನಪ್ಪಿದ್ದು, 11 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿ ಗುರುವಾರ ನಡೆದಿದೆ.
ಇಲ್ಲಿನ ಅಳಗುಸಿರೈ ಗ್ರಾಮದಲ್ಲಿರುವ ವಿಬಿಎಂ ಪಟಾಕಿ ಕಾರ್ಖಾನೆಯಲ್ಲಿ ಇಂದು ಮಧ್ಯಾಹ್ನ ಈ ದುರಂತ ಸಂಭವಿಸಿದೆ. ಈ ಸ್ಫೋಟದಲ್ಲಿ ಮೂರು ಕಟ್ಟಡಗಳು ಭಾಗಶಃ ಹಾನಿಗೊಂಡಿವೆ. ಮೊದಲ ಬ್ಲಾಕ್‌ನಲ್ಲಿ ಸ್ಫೋಟ ಸಂಭವಿಸಿ, ನಂತರ ಎರಡನೇ ಬ್ಲಾಕ್‌ಗೂ ಅದು ಹರಡಿದೆ. ಸ್ಫೋಟದ ತೀವ್ರತೆ ಎಷ್ಟರಮಟ್ಟಿಗಿತ್ತು ಎಂದರೆ ಮೃತರ ದೇಹದ ಭಾಗಗಳು ಕಾರ್ಖಾನೆಯ ಆವರಣದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಫೋಟದಲ್ಲಿ ಐವರ ಮೃತ ದೇಹಗಳು ಪತ್ತೆಯಾಗಿದ್ದು, ಇನ್ನೂ 11 ಮಂದಿ ಗಾಯಾಳುಗಳನ್ನು 108 ಆಂಬ್ಯುಲೆನ್ಸ್ ಮೂಲಕ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಊಟದ ವಿರಾಮದ ವೇಳೆ ಈ ಅವಘಡ ಸಂಭವಿಸಿದ್ದರಿಂದ ಹೆಚ್ಚಿನ ಪ್ರಾಣ ಹಾನಿ ತಪ್ಪಿದಂತಾಗಿದೆ. ಕಟ್ಟಡ ಕುಸಿತದಲ್ಲಿ ಯಾರಾದರೂ ಸಿಲುಕಿಕೊಂಡಿದ್ದಾರೆಯೇ ಎಂಬುದನ್ನು ಪತ್ತೆ ಹಚ್ಚಲು ಜೆಸಿಬಿ ಮೂಲಕ ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಪಟಾಕಿ ಕಾರ್ಖಾನೆಯು ಅನುಸುಯಾ ವಲ್ಲಿಯಪ್ಪನ್ ಎಂಬುವವರಿಗೆ ಸೇರಿದೆ ಎಂದು ಗೊತ್ತಾಗಿದೆ. ಘಟನಾ ಸ್ಥಳಕ್ಕೆ ಸಚಿವ ಪಿ.ಮೂರ್ತಿ ಹಾಗೂ ಮಾಜಿ ಸಚಿವ ಆರ್.ಬಿ.ಉದಯಕುಮಾರ್, ಜಿಲ್ಲಾಧಿಕಾರಿ ಅನೀಶ್ ಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಬಗ್ಗೆ ತಮಿಳುನಾಡು ರಾಜ್ಯಪಾಲ ಆರ್ಎನ್ ರವಿ ಮತ್ತು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ:ಅತ್ಯಾಚಾರ ಪ್ರಕರಣ: ಸೆಕ್ಯೂರಿಟಿ ಗಾರ್ಡ್‌ಗೆ ಡಿಕ್ಕಿ ಹೊಡೆದು ಪೊಲೀಸರಿಂದ ತಪ್ಪಿಸಿಕೊಂಡ ಆರೋಪಿ