ಪಾಲಿ (ರಾಜಸ್ಥಾನ):ಪಾಲಿ ಜಿಲ್ಲೆಯ ಸುಮೇರ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ 8 ಜನರು ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಮೂಲಗಳ ಪ್ರಕಾರ ಪಾಲಿ ಜಿಲ್ಲೆಯ ಸುಮೇರ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಜೈಸಲ್ಮೇರ್ ಜಿಲ್ಲೆಯ ರಾಮದೇವರ ದೇವಸ್ಥಾನಕ್ಕೆ ಭೇಟಿ ನೀಡಲು ಹೋಗುತ್ತಿದ್ದ ಟ್ರ್ಯಾಕ್ಟರ್ ಟ್ರಾಲಿಗೆ ಟ್ರಕ್ ಡಿಕ್ಕಿ ಹೊಡೆದಿದೆ ಎನ್ನಲಾಗ್ತಿದೆ. ಡಿಕ್ಕಿ ಹೊಡೆದ ರಭಸಕ್ಕೆ ಟ್ರ್ಯಾಕ್ಟರ್ ಟ್ರಾಲಿ ಪಲ್ಟಿಯಾಗಿ ಟ್ರಾಲಿಯಲ್ಲಿದ್ದವರು ರಸ್ತೆಗೆ ಬಿದ್ದಿದ್ದಾರೆ. ಮಾಹಿತಿ ಪಡೆದ ಸುಮೇರ್‌ಪುರ ಶಿವಗಂಜ್ ಠಾಣೆ ಪೊಲೀಸರು ಮತ್ತು ಹಲವಾರು ಆ್ಯಂಬುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಿವೆ. ಗಾಯಾಳುಗಳನ್ನು ಸುಮೇರ್‌ಪುರ ಮತ್ತು ಶಿವಗಂಜ್ ಸೇರಿದಂತೆ ಇತರ ಆಸ್ಪತ್ರೆಗಳಿಗೆ ದಾಖಲಿಸಿದ್ದಾರೆ.
ಘಟನೆಯಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮೂವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಗಾಯಗೊಂಡ ಇನ್ನೂ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಹೀಲ್ ಸೆಂಟರ್‌ಗೆ ದಾಖಲಿಸಲಾಗಿದೆ. ಅಪಘಾತದ ಮಾಹಿತಿ ಪಡೆದ ಸುಮೇರ್‌ಪುರ ಶಾಸಕ ಜೋರಾರಾಮ್ ಕುಮಾವತ್, ಸುಮೇರ್‌ಪುರ ಎಸ್‌ಡಿಎಂ, ಡಿಎಸ್‌ಪಿ ಮತ್ತು ಆಡಳಿತ ಮತ್ತು ಪೊಲೀಸ್ ಸಿಬ್ಬಂದಿ ಕೂಡ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ.