ಉನ್ನಾವೋ(ಉತ್ತರ ಪ್ರದೇಶ):ವೇಗದೂತ ಕಾರ್ವೊಂದು ನಿಯಂತ್ರಣ ತಪ್ಪಿ ವಾಹನಗಳಿಗೆ ಗುದ್ದಿ ಹಳ್ಳಕ್ಕೆ ಉರುಳಿ ಬಿದ್ದಿದೆ. ಪರಿಣಾಮ ಐವರು ಸಾವನ್ನಪ್ಪಿರುವ ಘಟನೆ ಫತೇಪುರ ಚೌರಾಸಿ ಬಳಿ ನಡೆದಿದೆ.
ಈ ಬಗ್ಗೆ ಮಾಹಿತಿ ನೀಡಿದ ಎಸ್ಪಿ ಆನಂದ್ ಕುಲ್ಕರ್ಣಿ, ನಿನ್ನೆ ಸಂಜೆ 7ರ ಸುಮಾರಿಗೆ ಕಾಜೀಪುರ ಬಂಗರ್ ಗ್ರಾಮದ ರಾಜಾರಾಮ್ ತನ್ನ ಮಗ ಮತ್ತು ಮೊಮ್ಮಗನ ಜೊತೆ ಬೈಕ್ನಲ್ಲಿ ಔಷಧಿ ತರಲು ತೆರಳುತ್ತಿದ್ದರು. ಈ ವೇಳೆ ಅತೀ ವೇಗದಲ್ಲಿದ್ದ ಕಾರ್ ನಿಯಂತ್ರಣ ಕಳೆದುಕೊಂಡು ರಾಜಾರಾಮ್ ಬೈಕ್ ಸೇರಿದಂತೆ ಎರಡು ಬೈಕ್ಗಳು, ಸೈಕಲ್‌ಗೆ ಡಿಕ್ಕಿ ಹೊಡೆದಿದೆ. ಬಳಿಕ ಮರಕ್ಕೆ ಡಿಕ್ಕಿಯಾಗಿ ರಸ್ತೆ ಪಕ್ಕದ ಹಳ್ಳಕ್ಕೆ ಉರುಳಿ ಬಿದ್ದಿದೆ ಎಂದರು.
ಅಪಘಾತದ ಬಗ್ಗೆ ಎಸ್ಪಿ ಮಾಹಿತಿ ಬೈಕ್ನಲ್ಲಿದ್ದ ರಾಕೇಶ್ (35), ಆತನ ತಂದೆ ರಾಜಾರಾಮ್ (65) ಮತ್ತು ರಾಕೇಶ್ ಮಗ ರಿತಿಕ್ (5) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೊಂದು ಬೈಕ್ನಲ್ಲಿ ಕೆಲಸದ ನಿಮಿತ್ತ ಮೂವರು ಮಾಧವ್ಗಂಜ್ನಿಂದ ಉನ್ನಾವೋಗೆ ಬರುತ್ತಿದ್ದರು. ಈ ವೇಳೆ ಕಾರು ಡಿಕ್ಕಿಯ ರಭಸಕ್ಕೆ ಅನೀಶ್ (25) ಮತ್ತು ಮೋಹಿತ್ (38) ಸಾವನ್ನಪ್ಪಿದ್ದು, ಸೌರಭ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಅಪಘಾತದಲ್ಲಿ ಸೈಕಲ್ ಸವಾರ ದೀಪಕ್ಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಎಸ್ಪಿ ತಿಳಿಸಿದರು.
ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮೃತರಿಗೆ 2 ಲಕ್ಷ ರೂ ಹಾಗೂ ಗಾಯಾಳುಗಳಿಗೆ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ಸೇವೆಗಳನ್ನು ಒದಗಿಸುವಂತೆಯೂ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.