ಬಕ್ಸರ್ (ಬಿಹಾರ): ಮಂತ್ರವಾದಿಯ ಮಾತು ಕೇಳಿ ತನ್ನ ಸ್ವಂತ ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳ ಮೇಲೆ ತಂದೆಯೊಬ್ಬ ಅತ್ಯಾಚಾರ ಎಸಗಿದ ಆರೋಪ ಪ್ರಕರಣದಲ್ಲಿ ಐವರನ್ನು ದೋಷಿ ಎಂದು ಬಿಹಾರದ ಬಕ್ಸರ್ ಜಿಲ್ಲೆಯ ವಿಶೇಷ ಪೋಕ್ಸೋ ನ್ಯಾಯಾಲಯ ಘೋಷಿಸಿದೆ. ತಂದೆ, ತಾಯಿ, ಚಿಕ್ಕಮ್ಮ ಹಾಗೂ ಮಂತ್ರವಾದಿ ಕೂಡ ದೋಷಿ ಎಂದು ಆದೇಶಿಸಿರುವ ಕೋರ್ಟ್, ಶಿಕ್ಷೆಯ ಪ್ರಮಾಣವನ್ನು ಸೆಪ್ಟೆಂಬರ್ 12ರಂದು ಪ್ರಕಟಿಸುವುದಾಗಿ ತಿಳಿಸಿದೆ.
ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಪೋಕ್ಸೋ ನ್ಯಾಯಾಲಯದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸುರೇಶ್ ಕುಮಾರ್ ಸಿಂಗ್, ಇದು 14 ಹಾಗೂ 16 ವರ್ಷದ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರಕ್ಕೆ ಸಂಬಂಧ ರಾಜ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾದ ಪ್ರಕರಣವಾಗಿದೆ. ವಿಶೇಷ ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶ ಮಂಕಮೇಶ್ವರ ಪ್ರಸಾದ್ ಚೌಬೆ ಅವರ ಪ್ರಕರಣದ ತ್ವರಿತ ವಿಚಾರಣೆ ನಡೆಸಿ ಅಪರಾಧಿಗಳ ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಕರಣದ ವಿವರ: ರಾಜ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದು, ಗಂಡು ಮಗು ಆಗಿರಲಿಲ್ಲ. ಹೀಗಾಗಿ ಈ ದಂಪತಿ ಮಂತ್ರವಾದಿ ಅಜಯ್ ಕುಮಾರ್ ಎಂಬಾತನ ಮೊರೆ ಹೋಗಿದ್ದರು. ಆಗ ಈತನ ಮಾತು ಕೇಳಿಕೊಂಡು ತಂದೆ ತನ್ನ ಸ್ವಂತ ಇಬ್ಬರು ಹೆಣ್ಣು ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಶುರುಮಾಡಿದ್ದ. ಅಲ್ಲದೇ, ಮಂತ್ರವಾದಿ ಹೇಳಿದ ಕೆಲ ಪೂಜೆಯನ್ನೂ ಪಾಲಿಸುತ್ತಿದ್ದ. ಇದರ ನಡುವೆ ಗಂಡು ಮಗು ಜನಿಸಿತ್ತು. ಆದರೆ, ಆಗ ಹುಟ್ಟಿದ ಮಗುವಿಗೆ ಅಪಾಯವಿದೆ ಎಂದು ಹೇಳಿ ತಾನು ಹೇಳುವ ಆಚರಣೆಗಳಲ್ಲಿ ಬಾಲಕಿಯರನ್ನೂ ತೊಡಗಿಸಬೇಕೆಂದು ಮಂತ್ರವಾದಿ ಸಲಹೆ ನೀಡಿದ್ದ. ಈ ವೇಳೆ, ಮಂತ್ರವಾದಿ ಕೂಡ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ಎಂದು ಹೇಳಲಾಗುತ್ತಿದೆ.