ನವದೆಹಲಿ: ರಾಹುಲ್ ಗಾಂಧಿ ಮೇಲೆ ಗಂಭೀರ ಆರೋಪ ಮಾಡಿ ಕಾಂಗ್ರೆಸ್ ಪಕ್ಷದಿಂದ ಗುಲಾಂ ನಬಿ ಆಜಾದ್ ಹೊರಬಂದಿದ್ದು, ಇದರ ಬೆನ್ನಲ್ಲೇ ಅವರ ನಡೆಗೆ ಬೆಂಬಲ ಸೂಚಿಸಿರುವ ಐವರು ಮಾಜಿ ಶಾಸಕರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಹಿರಿಯ ನಾಯಕನ ನಡೆಗೀಗ ಬೆಂಬಲ ವ್ಯಕ್ತವಾಗ್ತಿದ್ದು, ಕಾಂಗ್ರೆಸ್ ಪಕ್ಷದಲ್ಲಿ ರಾಜೀನಾಮೆ ಪರ್ವ ಶುರುವಾಗಿದೆ.
ರಾಹುಲ್ ವಿರುದ್ಧ ಆಜಾದ್ ತೀವ್ರ ಅಸಮಾಧಾನ: ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಾಗಿದ್ದ ಗುಲಾಂ ನಬಿ ಆಜಾದ್ ಇಂದು ಬೆಳಗ್ಗೆ ಪಕ್ಷದ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಎಲ್ಲ ಹುದ್ದೆಗಳಿಗೆ ರಾಜೀನಾಮೆ ಕೊಟ್ಟಿದ್ದರು. ಇದಕ್ಕೆ ಸಂಬಂಧಿಸಿದಂತೆ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಐದು ಪುಟಗಳ ಪತ್ರ ರವಾನಿಸಿದ್ದರು. ಇದರಲ್ಲಿ ಮುಖ್ಯವಾಗಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಕಳೆದ ಎಂಟು ವರ್ಷಗಳಿಂದ ಗಂಭೀರವಲ್ಲದ ವ್ಯಕ್ತಿಯೋರ್ವನ ಕೈಗೆ ಪಕ್ಷದ ನಾಯಕತ್ವದ ಚುಕ್ಕಾಣಿ ನೀಡಲು ಯತ್ನ ನಡೆದವು ಎಂದು ರಾಹುಲ್ ಗಾಂಧಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ:ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಗುಲಾಂ ನಬಿ ಆಜಾದ್
ಆಜಾದ್ ನಡೆಗೆ ಆಕ್ರೋಶ, ಆಘಾತ: ಗುಲಾಂ ನಬಿ ಆಜಾದ್ ನಡೆಗೆ ಕಾಂಗ್ರೆಸ್ ಪಕ್ಷದ ಕೆಲ ಹಿರಿಯ ನಾಯಕರು ಆಘಾತ ವ್ಯಕ್ತಪಡಿಸಿದ್ದು, ಇನ್ನೂ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ಗುಲಾಂ ನಬಿ ಆಜಾದ್ ನಡೆ ಬೆಂಬಲಿಸಿರುವ ಪಕ್ಷದ ಐವರು ಮಾಜಿ ಶಾಸಕರು ಇದೀಗ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರ ಬಂದಿದ್ದಾರೆ. ಜಮ್ಮು ಕಾಶ್ಮೀರದ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕರಾದ ಜಿಎಂ ಸರೂರಿ, ಹಾಜಿ ಅಬ್ದುಲ್ ರಶೀದ್, ಮೊಹಮ್ಮದ್ ಅಮೀನ್ ಭಟ್, ಗುಲ್ಜಾರ್ ಅಹ್ಮದ್ ವಾನಿ ಮತ್ತು ಚೌಧರಿ ಮೊಹಮ್ಮದ್ ಅಕ್ರಮ್ ಕಾಂಗ್ರೆಸ್ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಶುರುವಾಯ್ತು ರಾಜೀನಾಮೆ ಪರ್ವ: ಇದರ ಬೆನ್ನಲ್ಲೇ ಕಾಂಗ್ರೆಸ್ನ ಹಿರಿಯ ನಾಯಕ ಮತ್ತು ಮಾಜಿ ಸಚಿವ ಆರ್ ಎಸ್ ಚಿಬ್ ಕೂಡ ಕಾಂಗ್ರೆಸ್ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಹೊರಬಂದಿರುವ ಗುಲಾಂ ನಬಿ ಆಜಾದ್ ಇದೀಗ ಹೊಸ ಪಕ್ಷ ಕಟ್ಟುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ.