ಪ್ರಕಾಶಂ (ಆಂಧ್ರಪ್ರದೇಶ) :ಆಟೋವೊಂದು ಎಮ್ಮೆಯ ಮೃತದೇಹದ ಮೇಲೆ ಸಂಚರಿಸಿ ಬ್ಯಾಲೆನ್ಸ್ ತಪ್ಪಿದ್ದು, ಎದುರಿಗೆ ಬಂದ ಟಿಪ್ಪರ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಐವರು ಮೃತಪಟ್ಟಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ. ಜಿಲ್ಲೆಯ ತುರ್ಲಪಾಡು ಮಂಡಲದ ರೋಲುಗುಂಟಪದುವಿನಲ್ಲಿ ಈ ಅಪಘಾತ ಸಂಭವಿಸಿದೆ.
ಮೃತರನ್ನು ದರ್ಶಿ ಗ್ರಾಮದ ಪೊಟ್ಲಪತಿ ಸಾರಮ್ಮ, ಗೊಂಗಟಿ ಮಾರ್ತಮ್ಮ, ಇಟ್ಟಡಿ ಲಿಂಗಮ್ಮ, ಕೋಟಮ್ಮ ಮತ್ತು ಆಟೋ ಚಾಲಕ ವೆಂಕಟೇಶ್ವರರೆಡ್ಡಿ ಎಂದು ಗುರುತಿಸಲಾಗಿದೆ. ರಸ್ತೆ ದಾಟುತ್ತಿದ್ದಾಗ ಬೃಹತ್ ವಾಹನವೊಂದು ಡಿಕ್ಕಿ ಹೊಡೆದು ಎಮ್ಮೆ ಸ್ಥಳದಲ್ಲೇ ಮೃತಪಟ್ಟಿತ್ತು.
ಅದನ್ನು ಗಮನಿಸದ ಚಾಲಕ ಎಮ್ಮೆಯ ಮೃತದೇಹದ ಮೇಲೆಯೇ ಆಟೋ ಚಲಾಯಿಸಿದ್ದಾನೆ. ಬ್ಯಾಲೆನ್ಸ್ ತಪ್ಪಿದ ಆಟೋ, ಎದುರಿಗೆ ಬರುತ್ತಿದ್ದ ಮತ್ತೊಂದು ಟಿಪ್ಪರ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಸ್ಥಳದಲ್ಲೇ ಐವರು ಮೃತಪಟ್ಟಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಆಟೋದಲ್ಲಿ ಒಟ್ಟು 14 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಎರಡು ವರ್ಷದ ಪ್ರೀತಿಗೆ ಎಳ್ಳುನೀರು : ಬೇರೆ ಮದುವೆಯಾಗಲು ಮುಂದಾದ ಮಹಿಳೆ ಕೊಂದ ಪ್ರೇಮಿ
ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. ಗಾಯಾಳುಗಳನ್ನು ಮಾರ್ಕಾಪುರಂನ ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.