ಗುವಾಹಟಿ(ಅಸ್ಸೋಂ):ಅಸನಿ ಚಂಡಮಾರುತದಿಂದ ಅಸ್ಸೋಂನಲ್ಲಿ ಕಳೆದ ಕೆಲ ದಿನಗಳಿಂದ ಎಡೆಬಿಡದೇ ಮಳೆ ಸುರಿಯುತ್ತಿದ್ದು, ಅನೇಕ ಪ್ರದೇಶಗಳಲ್ಲಿ ಭೂಕುಸಿತ ಉಂಟಾಗಿ, ರಸ್ತೆ, ರೈಲು ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿವೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಇಲ್ಲಿಯವರೆಗೆ ಐವರು ಸಾವನ್ನಪ್ಪಿದ್ದು, 230ಕ್ಕೂ ಅಧಿಕ ಹಳ್ಳಿಗಳು ಜಲಾವೃತಗೊಂಡಿವೆ.
ಧಾರಾಕಾರ ಮಳೆಯಿಂದಾಗಿ ಬ್ರಹ್ಮಪುತ್ರ ಹಾಗೂ ಅದರ ಉಪನದಿಗಳು ತುಂಬಿ ಹರಿಯುತ್ತಿದ್ದು,ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಭೂಕುಸಿತದಿಂದಾಗಿ ಐವರು ಸಾವನ್ನಪ್ಪಿದ್ದಾಗಿ ಅಸ್ಸೋಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಾಹಿತಿ ನೀಡಿದೆ. ದಿಮಾ ಹಸಾವೊ ರೈಲು ನಿಲ್ದಾಣದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಅಲ್ಲಿನ ಜನರ ರಕ್ಷಣೆಗೋಸ್ಕರ ಹೆಲಿಕಾಪ್ಟರ್ ಬಳಕೆ ಮಾಡಲಾಗ್ತಿದೆ.
ಇದನ್ನೂ ಓದಿ:ಇನ್ಸ್ಟಾದಲ್ಲಿ 'ದೋಸ್ತಿ', ವರ್ಷಗಳ ಕಾಲ 'ಲಿವ್ ಇನ್ ರಿಲೇಶನ್ ಶಿಪ್'.. ಮದುವೆಯಾಗಿ ಏಳೇ ದಿನಕ್ಕೆ ಯುವಕ ಸೊಸೈಡ್!
ಮಳೆಯೊಂದಾಗಿ ರಂಗನದಿ ಜಲವಿದ್ಯುತ್ ಯೋಜನೆಯ ಕಪಿಲಿ ಮತ್ತು ಖಂಡೋಂಗ್ ಅಣೆಕಟ್ಟು ಗೇಟ್ ಓಪನ್ ಮಾಡಿದ್ದರಿಂದ ಯೋಜನೆಯ ಕೆಳಭಾಗದ ಅನೇಕ ಪ್ರದೇಶಗಳು ಜಲಾವೃತಗೊಂಡಿವೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ರಾಜ್ಯದ 230 ಹಳ್ಳಿ ಪ್ರವಾಹ ಪೀಡಿತಕ್ಕೊಳಗಾಗಿದ್ದು, ಸುಮಾರು 56,769 ಜನರ ಜೀವನ ಅಸ್ತವ್ಯಸ್ತಗೊಂಡಿದೆ. ಸುಮಾರು 10321.44 ಹೆಕ್ಟೇರ್ ಕೃಷಿ ಭೂಮಿ ಹಾನಿಗೊಳಗಾಗಿದೆ.
ಪ್ರವಾಹದಲ್ಲಿ ಸಿಲುಕಿದ ಆನೆಗಳು ಅಸ್ಸೋಂನಲ್ಲಿ ಹಠಾತ್ ಪ್ರವಾಹದಿಂದಾಗಿ ಹಲವಾರು ಸ್ಥಳಗಳಲ್ಲಿ ಭಾರಿ ಭೂಕುಸಿತ ಸಂಭವಿಸಿದೆ. ಆಸ್ತಿ - ಪಾಸ್ತಿ ಹಾನಿಗೊಳಗಾಗಿದೆ. ಇದರಿಂದಾಗಿ ರಾಜ್ಯದ ಇತರ ಭಾಗಗಳಿಂದ ರೈಲು ಮತ್ತು ರಸ್ತೆ ಸಂಪರ್ಕಗಳನ್ನು ಬಂದ್ ಮಾಡಲಾಗಿದೆ. ನ್ಯೂ ಕುಂಜಂಗ್, ಫಿಯಾಂಗ್‌ಪುಯಿ, ಮೌಲ್ಹೋಯ್, ನಮ್‌ಝುರಾಂಗ್, ಸೌತ್ ಬಾಗೇಟರ್, ಮಹಾದೇವ್ ತಿಲ್ಲಾ, ಕಲಿಬರಿ, ನಾರ್ತ್ ಬಾಗೇಟರ್, ಜಿಯಾನ್ ಮತ್ತು ಲೋಡಿ ಪಂಗ್ಮೌಲ್ ಗ್ರಾಮಗಳಲ್ಲಿ ಭೂಕುಸಿತ ಸಂಭವಿಸಿದ್ದು, ಸುಮಾರು 80 ಮನೆಗಳು ತೀವ್ರವಾಗಿ ಹಾನಿಗೊಳಗಾಗಿವೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ, 1,434 ಪ್ರಾಣಿಗಳಿಗೂ ಪ್ರವಾಹದಿಂದಾಗಿ ಸಾವನ್ನಪ್ಪಿದ್ದು, 202 ಮನೆಗಳು ಜಲಾವೃತಗೊಂಡಿವೆ. ಸೇನೆ, ಅರೆ ಮಿಲಿಟರಿ ಪಡೆಗಳು, ಎಸ್‌ಡಿಆರ್‌ಎಫ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ನಡೆಸಿವೆ.
ಪ್ರವಾಹದಲ್ಲಿ ಆನೆಗಳು:ಅಸ್ಸೋಂನಲ್ಲಿ ಸುರಿಯುತ್ತಿರುವ ರಣಭೀಕರ ಮಳೆ ಜನ ಜೀವನಕ್ಕಷ್ಟೇ ಅಲ್ಲದೆ ಪ್ರಾಣಿಗಳ ಜೀವನಕ್ಕೂ ಕುತ್ತು ತಂದಿದೆ. ಜೋರ್ಹತ್, ತೇಜ್ಪುರ್, ಗುವಾಹಟಿ, ಗೋಲ್ಪಾರ ಮತ್ತು ಧುಬ್ರಿ ಜಿಲ್ಲೆಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಬ್ರಹ್ಮಪುತ್ರ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕಾರಣ ಆನೆಗಳು ಪ್ರವಾಹದಲ್ಲಿ ಸಿಲುಕಿಕೊಂಡಿವೆ.