ದುಂಗರಪುರ:ತಂದೆಯ ಅಂತಿಮ ಯಾತ್ರೆಯಲ್ಲಿ ಹೆಣ್ಮಕ್ಕಳು ಪಾಲ್ಗೊಂಡು ವಿಧಿವಿಧಾನಗಳ ಮೂಲಕ ಅಂತ್ಯ ಸಂಸ್ಕಾರ ಮಾಡಿರುವ ಘಟನೆ ಇಲ್ಲಿನ ನವಲಾಶ್ಯಂ ಗ್ರಾಮದಲ್ಲಿ ನಡೆದಿದೆ.
ಈ ಮೂಲಕ ಸಂತೋಷ ಮತ್ತು ದುಃಖದ ಪ್ರತಿ ಕ್ಷಣದಲ್ಲೂ ಪುತ್ರರು ಮಾತ್ರವಲ್ಲ, ಪುತ್ರಿಯರು ಸಹ ತಂದೆಯೊಂದಿಗೆ ಇರುತ್ತಾರೆ ಎಂಬ ಸಂದೇಶವನ್ನು ಸಮಾಜಕ್ಕೆ ನೀಡಲು ಪ್ರಯತ್ನಿಸಿದರು.
ನವಲಾಶ್ಯಂ ಗ್ರಾಮದ ನಿವಾಸಿ ಕರುಲಾಲ್ ತ್ರಿವೇದಿಗೆ ಐವರು ಹೆಣ್ಣು ಮಕ್ಕಳಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಕರುಲಾಲ್ ಸಾವನ್ನಪ್ಪಿದ್ದರು. ಗಂಡು ಮಕ್ಕಳು ಇಲ್ಲದ ಕಾರಣ ಐವರು ಹೆಣ್ಮಕ್ಕಳೇ ತಮ್ಮ ತಂದೆಯ ಮೃತದೇಹವನ್ನು ಹೆಗಲ ಮೇಲೆ ಹೊತ್ತು ವಿಧಿ ವಿಧಾನಗಳ ಪ್ರಕಾರ ಅಂತ್ಯ ಸಂಸ್ಕಾರ ನೆರವೇರಿಸಿದರು. ಇದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸದೇ ಆ ಹೆಣ್ಮಕ್ಕಳಿಗೆ ಸಾಥ್ ನೀಡಿದರು.
ಹಿರಿಯ ಮಗಳು ನಿರ್ಮಲಾ, ಎರಡನೇ ಚಂದ್ರಕಾಂತ, ಕಿರಿಯ ಜಯಶ್ರೀ, ನಾಲ್ಕನೇ ನೀತಾ ಮತ್ತು ಐದನೇ ಸುರೇಖಾ ಸೇರಿದಂತೆ ಐವರು ಹೆಣ್ಮಕ್ಕಳು ತಂದೆಯ ಅಂತಿಮ ಪ್ರಯಾಣದಲ್ಲಿ ಗಂಡು ಮಕ್ಕಳಂತೆ ಹೆಗಲು ಕೊಟ್ಟರು. ತಮ್ಮ ತಂದೆಯ ದೇಹವನ್ನು ಚಿತಾಗಾರಕ್ಕೆ ಕೊಂಡೊಯ್ದು ಹಿಂದೂ ವಿಧಿ ವಿಧಾನಗಳ ಪ್ರಕಾರ ತಮ್ಮ ತಂದೆಯ ಅಂತ್ಯಕ್ರಿಯೆ ನೆರವೇರಿಸಿದರು.