ಕಾನ್ಪುರ(ಉತ್ತರ ಪ್ರದೇಶ): 14.56 ಲಕ್ಷ ರೂ. ಹಣ, ವಿದೇಶಿ ಕರೆನ್ಸಿ ಹೊಂದಿದ್ದ ಸೇರಿದಂತೆ ನಕಲಿ ಆಧಾರ್ ಕಾರ್ಡ್, ನಕಲಿ ಭಾರತೀಯ ಪಾಸ್‌ಪೋರ್ಟ್‌ಗಳು, ಬಾಂಗ್ಲಾದೇಶದ ಪಾಸ್‌ಪೋರ್ಟ್‌ಗಳು ಮತ್ತು ಇತರ ದಾಖಲೆಗಳ ಜೊತೆಗೆ ಕಾನ್ಪುರದಲ್ಲಿ ಅಕ್ರಮವಾಗಿ ತಂಗಿದ್ದ ಐವರು ಬಾಂಗ್ಲಾದೇಶಿ ಪ್ರಜೆಗಳನ್ನು ಕಾನ್ಪುರ ಪೊಲೀಸ್ ಕಮಿಷನರೇಟ್ ಭಾನುವಾರ ಬಂಧಿಸಿದ್ದಾರೆ. ಈ ಹೊಸ ಪ್ರಕರಣದೊಂದಿಗೆ ಇದೀಗ ಉತ್ತರ ಪ್ರದೇಶದಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರ ಸಮಸ್ಯೆ ಮತ್ತೆ ಮುನ್ನೆಲೆಗೆ ಬಂದಿದೆ.
ಐವರು ಆರೋಪಿಗಳು ಒಂದೇ ಕುಟುಂಬದ ಸದಸ್ಯರಾಗಿದ್ದು, ರಿಜ್ವಾನ್ ಮೊಹಮ್ಮದ್(53), ಆತನ ಭಾರತೀಯ ಮೂಲದ ಪತ್ನಿ ಹಿನಾ ಖಾಲಿದ್(45), ರಿಜ್ವಾನ್ ತಂದೆ ಖಾಲಿದ್ ಮಜೀದ್(79), ದಂಪತಿ ಮಕ್ಕಳಾದ ರುಖ್ಸರ್ ರಿಜ್ವಾನ್(21) ಮತ್ತು ಒಬ್ಬ 17 ವರ್ಷದ ಬಾಲಾಪರಾಧಿ ಎಂದು ಗುರುತಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಆನಂದ್ ಪ್ರಕಾಶ್ ತಿವಾರಿ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರಂಭದಲ್ಲಿ ರಿಜ್ವಾನ್ ಪೊಲೀಸರನ್ನು ದಾರಿ ತಪ್ಪಿಸಲು ಪ್ರಯತ್ನಿಸಿದ್ದು, ನಂತರ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ರಿಜ್ವಾನ್ 1996ರಲ್ಲಿ ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಬಂದಿದ್ದು, 1998ರಲ್ಲಿ ದೆಹಲಿಯಲ್ಲಿ ಹಿನಾ ಖಾಲಿದ್ ಅವರನ್ನು ಮದುವೆಯಾಗಿದ್ದನು. ನಂತರ ಮಡದಿ ಹಿನಾಳನ್ನು ದೆಹಲಿ ಮೂಲಕ ಪಶ್ಚಿಮ ಬಂಗಾಳಕ್ಕೆ ತಲುಪಿ, ಅಲ್ಲಿಂದ ನಂತರ ಬಾಂಗ್ಲಾದೇಶಕ್ಕೆ ಅತಿಕ್ರಮವಾಗಿ ಕರೆದುಕೊಂಡು ಹೋಗಿದ್ದಾನೆ. ಅಲ್ಲಿಂದ ಭಾರತಕ್ಕೆ ಹಿಂತಿರುಗುವ ಮೊದಲು ಹಿನಾ ಖಾಲಿದ್ ಬಾಂಗ್ಲಾದೇಶದ ಪಾಸ್ಪೋರ್ಟ್ ಅನ್ನು ಪಡೆದಿದ್ದಾಳೆ. ನಂತರ ಅವರ ಇಬ್ಬರು ಮಕ್ಕಳು ಕೂಡ ಅಕ್ರಮವಾಗಿ ಬಾಂಗ್ಲಾದೇಶಕ್ಕೆ ಹೋಗಿ ಅಲ್ಲಿನ ಪಾಸ್ಪೋರ್ಟ್ ಪಡೆದು ಭಾರತಕ್ಕೆ ಮರಳಿದ್ದಾರೆ.