ಮುಂಬೈ: ಕೊರೊನಾ ವೈರಸ್ನಿಂದ ದೇಶ ತತ್ತರಿಸುತ್ತಿರುವ ಸಂದರ್ಭದಲ್ಲಿ ಝಿಕಾ ವೈರಸ್ ದಾಳಿ ನಡೆಸುತ್ತಿದೆ. ಇದೀಗ ಮಹಾರಾಷ್ಟ್ರದಲ್ಲಿ ಮೊದಲ ಝಿಕಾ ವೈರಸ್ ಪತ್ತೆಯಾಗಿದೆ.
ಈ ಪ್ರಕರಣವು ಪುಣೆ ಜಿಲ್ಲೆಯಿಂದ ವರದಿಯಾಗಿದೆ. ವೈರಸ್ ಪತ್ತೆಯಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಸೋಂಕಿಗೆ ತುತ್ತಾದ ಮಹಿಳೆಗೆ ಸೂಕ್ತ ಚಿಕಿತ್ಸೆ ನೀಡಿದ್ದಾರೆ. ಸದ್ಯ ಆಕೆ ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ರೋಗಿಯ ಕುಟುಂಬ ಸದಸ್ಯರಿಗೂ ಸೋಂಕು ಪರೀಕ್ಷೆ ನಡೆಸಲಾಗಿದೆ. ಅದೃಷ್ಟವಶಾತ್ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ.
ಪುರಂದರ್ ತಹಸಿಲ್‌ನ ಬೆಲ್ಸರ್ ಹಳ್ಳಿಯ ನಿವಾಸಿ 50 ವರ್ಷದ ಮಹಿಳೆಗೆ ಶುಕ್ರವಾರದಂದು ಸೋಂಕು ಪರೀಕ್ಷೆ ನಡೆಸಲಾಗಿದೆ. ಈ ವೇಳೆ ಚಿಕುನ್ಗುನ್ಯಾ ಜೊತೆಗೆ ಝಿಕಾ ವೈರಸ್ ಕೂಡ ಇರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ವೈದ್ಯಕೀಯ ತಂಡವು ಶನಿವಾರ ಗ್ರಾಮಕ್ಕೆ ಭೇಟಿ ನೀಡಿ ಸರ್ಪಂಚ್ ಮತ್ತು ಗ್ರಾಮ ಪಂಚಾಯತ್ ಸದಸ್ಯರನ್ನು ಭೇಟಿಯಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಿದೆ.
ಝಿಕಾ ಎಂದರೇನು? ರೋಗ ಲಕ್ಷಣಗಳಾವುವು?
ಝಿಕಾ ವೈರಸ್,ಈಡಿಸ್ ಈಜಿಪ್ಟಿ ಸೊಳ್ಳೆ (Aedes Aegypti Mosquito)ಯ ಕಡಿತದ ಮೂಲಕ ಹರಡುತ್ತದೆ. ಈ ವೈರಸ್ ದೇಹಕ್ಕೆ ಹೊಕ್ಕಿದರೂ ಕೆಲವರಲ್ಲಿ ರೋಗ ಲಕ್ಷಣಗಳು ಕಂಡುಬರುವುದಿಲ್ಲ ಎಂದು ಸಂಶೋಧನೆಯೊಂದು ತಿಳಿಸಿದೆ. ಒಂದು ವೇಳೆ ಕಂಡು ಬಂದರೆ ಜ್ವರ, ದೇಹದ ನೋವು ಮತ್ತು ಕಣ್ಣು ಕೆಂಪಾಗುವುದು(conjunctivitis) ಇಂತಹ ಲಕ್ಷಣಗಳು ಕಂಡುಬರುತ್ತದೆ. ಈ ವೈರಸ್ ಗರ್ಭಿಣಿಯರ ಮೇಲೆ ಪ್ರಭಾವ ಬೀರುವುದರಿಂದ ಹೆಚ್ಚು ಜಾಗರೂಕರಾಗಿರಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ರಾಜ್ಯ ಸರ್ವಿಲೆನ್ಸ್ ಅಧಿಕಾರಿ ಡಾ.ಪ್ರದೀಪ್ ಅವಟೆ ಈ ಬಗ್ಗೆ ಮಾತನಾಡಿದ್ದು, "ಶೇಕಡಾ 80 ರಷ್ಟು ರೋಗಿಗಳಿಗೆ ಯಾವುದೇ ರೋಗಲಕ್ಷಣಗಳು ಇರುವುದಿಲ್ಲ. ಉಳಿದ ಶೇ.20 ರಷ್ಟು ಜನರು ಸಾಧಾರಣ ಜ್ವರದಂತಹ ರೋಗಲಕ್ಷಣಗಳನ್ನು ಹೊಂದಿರುತ್ತಾರೆ. ಸಾಕಷ್ಟು ನೀರು ಕುಡಿಯುವುದು, ವಿಶ್ರಾಂತಿ ತೆಗೆದುಕೊಳ್ಳುವುದು ಮತ್ತು ಪ್ಯಾರಸಿಟಮಾಲ್ ಟ್ಯಾಬ್ಲೆಟ್ ಸೇವಿಸುವುದರಿಂದ ಚೇತರಿಸಿಕೊಳ್ಳಬಹುದು" ಎಂದು ಹೇಳಿದ್ದಾರೆ.
"ಇಲ್ಲಿವರೆಗೆ ಝಿಕಾ ವೈರಸ್ನಿಂದ ಸಾವು ಸಂಭವಿಸಿಲ್ಲ. 2019ರಲ್ಲಿ ಬ್ರೆಜಿಲ್‌ನಲ್ಲಿ ಝಿಕಾ ವೈರಸ್ ಗರ್ಭಾವಸ್ಥೆಯಲ್ಲಿದ್ದ ಮಹಿಳೆಯಲ್ಲಿ ಕಂಡುಬಂದಿತ್ತು. ಆಗ ಆ ರೋಗ ಲಕ್ಷಣದಿಂದ ಮಗುವಿಗೆ ಅಪಾಯ ಉಂಟಾಗಬಹುದು ಎನ್ನಲಾಗಿತ್ತು. ಆದರೆ ಅಂತಹ ಅಪಾಯ ಸಂಭವಿಸಿಲ್ಲ. ಆದರೂ ಗರ್ಭಿಣಿಯರ ವಿಶೇಷ ಆರೈಕೆಯ ಅಗತ್ಯತೆಗೆ ನಾವು ಒತ್ತು ನೀಡಬೇಕು" ಎಂದು ಇದೇ ವೇಳೆ ತಿಳಿಸಿದರು.
ಪುಣೆ ಜಿಲ್ಲೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಯುಷ್ ಪ್ರಸಾದ್ ಮಾತನಾಡಿ, "ಜನರು ಭಯಪಡಬೇಡಿ. ನಮ್ಮ ತಂಡಗಳ ಪೂರ್ವಭಾವಿ ಕೆಲಸದಿಂದಾಗಿ ಪ್ರಕರಣ ಪತ್ತೆಯಾಗಿದೆ. ಹರಡುವಿಕೆಯನ್ನು ನಿಯಂತ್ರಿಸಲು ಮತ್ತು ಜನರಿಗೆ ಉತ್ತಮ ಆರೋಗ್ಯ ಸೇವೆ ಲಭ್ಯವಾಗುವಂತೆ ಮಾಡಲು ಶ್ರಮಿಸುತ್ತಿದ್ದೇವೆ" ಎಂದು ಹೇಳಿದರು.