ಮುಂಬೈ(ಮಹಾರಾಷ್ಟ್ರ): ಎರಡು ವಿವಾಹವಾಗಿರುವ ಓರ್ವ ವ್ಯಕ್ತಿ ಮೃತಪಟ್ಟ ನಂತರ ಆತನಿಗೆ ಬರುವ ಪಿಂಚಣಿ ವಿಚಾರವಾಗಿ ಬಾಂಬೆ ಹೈಕೋರ್ಟ್ ಮಹತ್ವದ ಆದೇಶ ಹೊರಹಾಕಿದೆ. ಮೊದಲ ಪತ್ನಿಯು ಕಾನೂನುಬದ್ಧವಾಗಿ ವಿಚ್ಛೇದನ ಪಡೆದಿಲ್ಲವಾದರೆ ಎರಡನೇ ಪತ್ನಿ ಮೃತಪಟ್ಟಿರುವ ಪತಿಯ ಪಿಂಚಣಿಗೆ ಅರ್ಹಳಲ್ಲ ಎಂದು ಹೇಳಿದೆ.
ಆದೇಶಕ್ಕೆ ಕಾರಣವಾದ ಪ್ರಕರಣ: ಸೊಲ್ಲಾಪುರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಮಹಾದೇವ ತಾಟೆ ಎಂಬುವವರು ಎರಡು ಮದುವೆಯಾಗಿದ್ದರು. ಮೊದಲ ಪತ್ನಿ ಜೀವಂತವಿರುವಾಗಲೇ ವಿಚ್ಛೇದನ ಪಡೆಯದೇ ಶ್ಯಾಮಲಾ ತಾಟೆ ಅವರನ್ನು ಮಹಾದೇವ ತಾಟೆ ವಿವಾಹವಾಗಿದ್ದು, 1996ರಲ್ಲಿ ನಿಧನರಾದರು. ಅವರ ಮರಣದ ನಂತರ ಅವರ ಮೊದಲ ಪತ್ನಿ ಕಾನೂನು ಪ್ರಕಾರ ಪಿಂಚಣಿಗೆ ಅರ್ಹರಾಗಿದ್ದರು.
ಮೊದಲ ಪತ್ನಿಯೇ ಪಿಂಚಣಿ ಪಡೆಯುತ್ತಿದ್ದು, ಕೆಲವು ವರ್ಷಗಳ ನಂತರ ಕ್ಯಾನ್ಸರ್ನಿಂದ ಆಕೆಯೂ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮಹದೇವ್ ತಾಟೆ ಅವರ ಎರಡನೇ ಪತ್ನಿ ಶ್ಯಾಮಲ್ ತಾಟೆ ಅವರು ಪಿಂಚಣಿ ಪಡೆಯುವ ಸಲುವಾಗಿ 2007ರಿಂದ 2014ರ ನಡುವೆ ರಾಜ್ಯ ಸರ್ಕಾರಕ್ಕೆ ನಾಲ್ಕು ಬಾರಿ ಪತ್ರ ಬರೆದಿದ್ದಾರೆ. ಆದರೆ, ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ.