ಕೊಚ್ಚಿ:ಕೇರಳ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮೊದಲ ತೃತೀಯ ಲಿಂಗಿ ಅನನ್ಯ ಕುಮಾರಿ ಅಲೆಕ್ಸ್ ಅವರು ತಮ್ಮ ನಾಮಪತ್ರವನ್ನು ಹಿಂತೆಗೆದುಕೊಂಡಿದ್ದಾರೆ. ಡೆಮಾಕ್ರಟಿಕ್ ಸೋಷಿಯಲ್ ಜಸ್ಟೀಸ್ ಪಾರ್ಟಿ ಪಕ್ಷದಲ್ಲಿ ಲಿಂಗ ತಾರತಮ್ಯ ಮತ್ತು ಲೈಂಗಿಕ ಕಿರುಕುಳವನ್ನು ತಾನು ಎದುರಿಸಿದ್ದಾಗಿ ಅವರು ಆರೋಪಿಸಿದ್ದಾರೆ.
ಅನನ್ಯ ಕುಮಾರಿ ಅವರನ್ನು ಮಲಪ್ಪುರಂ ಜಿಲ್ಲೆಯ ವೆಂಗಾರಾ ವಿಧಾನಸಭಾ ಕ್ಷೇತ್ರದಿಂದ ಅಭ್ಯರ್ಥಿಯನ್ನಾಗಿ ಡಿಎಸ್ಜೆಪಿ ಆಯ್ಕೆ ಮಾಡಿತ್ತು. ಯುಡಿಎಫ್ ಒಕ್ಕೂಟದ ಪ್ರತಿನಿಧಿ ಯೂನಿಯನ್ ಮುಸ್ಲಿಂ ಲೀಗ್ ಅಭ್ಯರ್ಥಿ ಪಿ.ಕೆ. ಕುನ್ಹಾಲಿಕುಟ್ಟಿ ಮತ್ತು ಎಲ್ಡಿಎಫ್ ಪ್ರತಿನಿಧಿಯಾಗಿರುವ ಸಿಪಿಎಂ ಅಭ್ಯರ್ಥಿ ಪಿ. ಜಿಜಿ ವಿರುದ್ಧ ಅವರು ಸ್ಪರ್ಧಿಸಿದ್ದರು.
'ಡಿಎಸ್ಜೆಪಿ ನಾಯಕರು ನನ್ನನ್ನು ಬಳಸಿಕೊಂಡಿದ್ದಾರೆ. ನನ್ನನ್ನು ಮುಂದಿರಿಸಿಕೊಳ್ಳುವುದರ ಹಿಂದೆ ಬೇರೆಯೇ ಯೋಜನೆ ಮತ್ತು ಕಾರಣಗಳಿದ್ದವು. ಆದರೆ ನನಗೆ ಆರಂಭದಲ್ಲಿ ಅದು ಅರ್ಥವಾಗಿರಲಿಲ್ಲ. ಕೇರಳದಲ್ಲಿನ ತೃತೀಯಲಿಂಗಿ ಜನರನ್ನು ಪ್ರತಿನಿಧಿಸಲು ಮತ್ತು ಅವರಿಗೆ ಸಮಾನತೆ ಕಲ್ಪಿಸುವ ಉದ್ದೇಶದಿಂದ ನಾನು ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದೆ. ಆದರೆ ವೆಂಗಾರಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ನನಗೆ ಪಕ್ಷವು ಸೂಚನೆ ನೀಡಿತ್ತು. ಅದು ಕೂಡ ನನ್ನ ನಿರ್ಧಾರವಾಗಿರಲಿಲ್ಲ' ಎಂದು ತಿಳಿಸಿದ್ದಾರೆ.