ಚಮೋಲಿ(ಉತ್ತರಾಖಂಡ):ಡಿಜಿಟಲ್ ಕ್ರಾಂತಿಯಿಂದಾಗಿ ಇಡೀ ವಿಶ್ವವೇ ಬೆಸೆದುಕೊಂಡಿದೆ. ಆದರೆ, ಇಲ್ಲೊಂದು ಹಳ್ಳಿಯಲ್ಲಿ ಮೊದಲ ಬಾರಿಗೆ ಮೊಬೈಲ್ ರಿಂಗಣಿಸಿದೆ ಅಂದರೆ ಅಚ್ಚರಿಯ ಸಂಗತಿಯೇ. ಆ ಗ್ರಾಮ ಇರುವುದು ಉತ್ತರಾಖಂಡದ ದುರ್ಗಮ ಪ್ರದೇಶದಲ್ಲಿ. ಹೆಸರು ಪಿನೌ ಗಾಂವ್.
ಇದು ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಅಂಗರಕ್ಷಕರಾಗಿದ್ದ ದೇವ್ಸಿಂಗ್ ದಾನು ಅವರ ಹುಟ್ಟೂರು. 21ನೇ ಶತಮಾನದವರೆಗೂ ಈ ಗ್ರಾಮಕ್ಕೆ ಡಿಜಿಟಲ್ ಕ್ರಾಂತಿ ಕಾಲಿಟ್ಟಿರಲಿಲ್ಲ ಎಂಬುದೇ ಅಚ್ಚರಿಯ ವಿಷಯ. ದುರ್ಗಮ ಪ್ರದೇಶದಲ್ಲಿರುವ ಈ ಹಳ್ಳಿಗೆ ಕೊನೆಗೂ 'ನೆಟ್ವರ್ಕ್' ಸೇವೆ ವಿಸ್ತರಿಸಿದೆ. ಉತ್ತರಾಖಂಡ ಚಮೋಲಿ ಜಿಲ್ಲೆಯ ದೇವಾಲ್ ಡೆವಲಪ್‌ಮೆಂಟ್ ಬ್ಲಾಕ್‌ನ ಪಿನೌ ಗಾಂವ್ ಗ್ರಾಮದಲ್ಲಿ ಮೊದಲ ಬಾರಿಗೆ ಸಂಪರ್ಕ ಸೇವೆ ಆರಂಭಗೊಂಡಿರುವುದಕ್ಕೆ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ಸಂವಹನ ಸೇವೆ ನೀಡಿದ ಜಿಯೋ:ಶತಮಾನಗಳಿಂದಲೂ ಸಂವಹನ ಸಂಪರ್ಕದಿಂದ ವಂಚಿತವಾಗಿದ್ದ ಈ ಕುಗ್ರಾಮಕ್ಕೆ ಭಾರತದ ಅತಿದೊಡ್ಡ ನೆಟ್ವರ್ಕ್ ಆಗಿ ಬೆಳೆಯುತ್ತಿರುವ 'ಜಿಯೋ ರಿಲಯನ್ಸ್' ನೆಟ್ವರ್ಕ್ ಸೇವೆ ಪ್ರಾರಂಭಿಸಿದೆ. ಈ ಗ್ರಾಮದಲ್ಲಿ 20 ಕುಟುಂಬಗಳ 80 ಜನರು ವಾಸಿಸುತ್ತಿದ್ದಾರೆ. ರಸ್ತೆ, ಶಾಲೆಗಳಂತಹ ಮೂಲಸೌಕರ್ಯಗಳ ಕೊರತೆಯಿದ್ದರೂ ಇಲ್ಲಿನ ಜನರು ಮಾತ್ರ ಗುಳೆ ಹೋಗಿರಲಿಲ್ಲ. ಒಂದಲ್ಲ ಒಂದು ದಿನ ಗ್ರಾಮಕ್ಕೆ ಸೌಕರ್ಯಗಳು ದೊರೆಯುತ್ತವೆ ಎಂದು ಚಾತಕ ಪಕ್ಷಿಯಂತೆ ಕಾದಿದ್ದರು. ಇದೀಗ ಸಂವಹನ ಸಾಧಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.