ಘಾಜಿಯಾಬಾದ್:ಕಳೆದ 30 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಉತ್ತರ ಪ್ರದೇಶದ ಎಲ್ಲ 403 ಕ್ಷೇತ್ರಗಳಲ್ಲಿ ನಮ್ಮ ಪಕ್ಷ ಸ್ಪರ್ಧಿಸುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ತಿಳಿಸಿದ್ದಾರೆ.
ಘಾಜಿಯಾಬಾದ್ನಲ್ಲಿ ಮನೆ ಮನೆ ಪ್ರಚಾರದ ವೇಳೆ ಮಾತನಾಡಿದ ಕಾಂಗ್ರೆಸ್ ನಾಯಕಿ, ನಾವು ನಮ್ಮ ಸಾಮರ್ಥ್ಯದಿಂದ ಹೋರಾಡುತ್ತೇವೆ. ಕಳೆದ 30 ವರ್ಷಗಳಲ್ಲಿ ಮೊದಲ ಸಲ ಎಲ್ಲ ಕ್ಷೇತ್ರಗಳಿಂದ ಕಣಕ್ಕಿಳಿದಿದ್ದೇವೆ ಎಂದಿದ್ದಾರೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಅವರ ಚಿಕ್ಕಪ್ಪ ಶಿವಪಾಲ್ ಸಿಂಗ್ ಯಾದವ್ ವಿರುದ್ಧ ಯಾವುದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಲ್ಲ ಎಂದು ಯುಪಿ ಸ್ಟಾರ್ ಪ್ರಚಾರಕ ಸಚಿನ್ ಪೈಲಟ್ ಈ ಮೊದಲು ತಿಳಿಸಿದ್ದರು. 2004, 2009, 2014 ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಸ್ಪರ್ಧಿಸಿದ್ದ ರಾಯಬರೇಲಿ ಕ್ಷೇತ್ರದಿಂದ ಎಸ್ಪಿ ಯಾವುದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರಲಿಲ್ಲ. ಆದ್ರೆ 2019ರಲ್ಲಿ ರಾಹುಲ್ ಗಾಂಧಿ ಕಣಕ್ಕಿಳಿದಿದ್ದ ಅಮೇಥಿ ಕ್ಷೇತ್ರದಿಂದ ಎಸ್ಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು.
ಉತ್ತರ ಪ್ರದೇಶದ ಚುನಾವಣೆಯಲ್ಲಿ ಪ್ರಚಾರದ ಕಾವು ಏರಿದ್ದು, ಫೆ.10 ರಂದು ಮೊದಲ ಹಂತದ ಮತದಾನ ನಡೆಯಲಿದೆ. 2, 3, 4, 5, 6 ಹಾಗೂ 7ನೇ ಹಂತದ ಮತದಾನ ಕ್ರಮವಾಗಿ ಫೆ.14, ಫೆ,20, ಫೆ,23, ಫೆ,27, ಮಾ.3 ಮತ್ತು ಮಾ.7 ರಂದು ನಡೆಯಲಿದೆ. ಮಾ.10 ರಂದು ಫಲಿತಾಂಶ ಹೊರಬರಲಿದೆ.
(ಇದನ್ನೂ ಓದಿ: ಕೋವಿಡ್ನಿಂದ ಪತಿ ನಿಧನ : ತಬ್ಬಲಿ ಮಗು, ವಿಧವೆಗೆ ಹೊಸ ಬಾಳು ನೀಡಿದ ಮೃತ ಗಂಡನ ಸಹೋದರ!)