ನವದೆಹಲಿ: ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಿಕೆಗಾಗಿ ದೇಶಿಯವಾಗಿ ಅಭಿವೃದ್ಧಿಪಡಿಸಲಾದ ಕ್ವಾಡ್ರಿವೇಲೆಂಟ್ ಹ್ಯೂಮನ್ ಪ್ಯಾಪಿಲೋಮಾ ವೈರಸ್ (ಹೆಚ್ಪಿವಿ) ಲಸಿಕೆ ಕೆಲವೇ ತಿಂಗಳಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಇದರ ಬೆಲೆಯು ಕೂಡ 200ರಿಂದ 400 ರೂಪಾಯಿಗಳ ಕೈಗೆಟುಕುವ ರೀತಿಯಲ್ಲಿ ಇರಲಿದೆ.
ಗುರುವಾರ ಹೆಚ್ಪಿವಿ ಲಸಿಕೆಯ ವೈಜ್ಞಾನಿಕ ಪ್ರಯೋಗ ಪೂರ್ಣಗೊಳಿಸಿರುವ ಬಗ್ಗೆ ಘೋಷಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಉದ್ದೇಶಿಸಿ ಮಾತನಾಡಿದ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್, ಗರ್ಭಕಂಠದ ಕ್ಯಾನ್ಸರ್ ವಿರುದ್ಧದ ಲಸಿಕೆಗಳ ಅಭಿವೃದ್ಧಿ ಹಾಗೂ ಆರೋಗ್ಯ ರಕ್ಷಣೆಯ ಬಗ್ಗೆ ಕೋವಿಡ್ ಜಾಗೃತಿ ಮೂಡಿಸಿದೆ ಎಂದರು.
ಅಲ್ಲದೇ, ಆಯುಷ್ಮಾನ್ ಭಾರತ್‌ನಂತಹ ಯೋಜನೆಗಳು ಆರೋಗ್ಯ ರಕ್ಷಣೆ ಮಹತ್ವವನ್ನು ಹೊಂದಿದೆ. ಇದರಲ್ಲಿ ಜೈವಿಕ ತಂತ್ರಜ್ಞಾನ ಇಲಾಖೆಯು ಮುಂದಾಳತ್ವ ವಹಿಸಿದೆ. ಕೆಲ ವೈಜ್ಞಾನಿಕ ಪ್ರಯೋಗಗಳು ಮನ್ನಣೆಯನ್ನು ಪಡೆಯುವುದಿಲ್ಲ. ಆದ್ದರಿಂದ ಈ ಕಾರ್ಯಕ್ರಮವು ವೈಜ್ಞಾನಿಕವಾಗಿ ಪೂರ್ಣಗೊಳಿಸುವಿಕೆಯನ್ನು ಆಚರಿಸುವುದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಸಿಇಒ ಆದಾರ್ ಪೂನವಾಲಾ ಮಾಧ್ಯಮದವರೊಂದಿಗೆ ಮಾತನಾಡಿ, ಗರ್ಭಕಂಠದ ಕ್ಯಾನ್ಸರ್ ಲಸಿಕೆಗೆ ಕೈಗೆಟುಕುವ ಬೆಲೆ ಇರಲಿದೆ. ಅದು 200-400 ರೂಪಾಯಿಗಳೊಳಗೆಯೇ ಲಭ್ಯವಿರುತ್ತದೆ. ಆದರೆ, ಅಂತಿಮ ಬೆಲೆಯನ್ನು ಇನ್ನೂ ನಿಗದಿ ಮಾಡಿಲ್ಲ. ವರ್ಷಾಂತ್ಯದ ವೇಳೆಗೆ ಈ ಲಸಿಕೆಯನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು.
200 ಮಿಲಿಯನ್ ಡೋಸ್ ಉತ್ಪಾದನೆ: ಮೊದಲು ಲಸಿಕೆಯನ್ನು ಸರ್ಕಾರದ ಮೂಲಕ ಲಭ್ಯವಾಗುವಂತೆ ಮಾಡಲಾಗುವುದು. ಮುಂದಿನ ವರ್ಷದಿಂದ ಕೆಲವು ಖಾಸಗಿ ಪಾಲುದಾರರು ಸಹ ಇದರಲ್ಲಿ ಭಾಗಿಯಾಗಲಿದ್ದಾರೆ. ಪ್ರಸ್ತುತ ಎರಡು ವರ್ಷದಲ್ಲಿ 200 ಮಿಲಿಯನ್ ಡೋಸ್‌ಗಳನ್ನು ತಯಾರಿಸುವ ಯೋಜನೆ ಇದೆ. ಮೊದಲು ಲಸಿಕೆಯನ್ನು ಭಾರತದಲ್ಲೇ ನೀಡಲಾಗುವುದು. ನಂತರ ಇತರ ದೇಶಗಳಿಗೆ ರಫ್ತು ಮಾಡುವ ಯೋಚನೆ ಇದೆ ಎಂದು ತಿಳಿಸಿದ್ದಾರೆ.