ಶಬರಿಮಲೆ:ಪ್ರಸಿದ್ಧ ಧಾರ್ಮಿಕ ಸ್ಥಳವಾದ ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಬುಧವಾರ ಮಂಡಲ ಪೂಜೆ ನಡೆಸಿದ ಬಳಿಕ ಯಾತ್ರೆಯ ಮೊದಲ ಚರಣ ಮುಕ್ತಾಯವಾಗಲಿದ್ದು, ದೇವಸ್ಥಾನದ ಬಾಗಿಲನ್ನು ರಾತ್ರಿ 11 ಗಂಟೆಗೆ ಮುಚ್ಚಲಾಗುತ್ತದೆ. 41 ದಿನಗಳ ಪೂಜಾ ಕೈಂಕರ್ಯಗಳು ಇಂದಿಗೆ ಮುಗಿಯಲಿವೆ. ಮಕರಜ್ಯೋತಿಯ ಕಾರಣ ಡಿಸೆಂಬರ್ 30 ರಿಂದ ದೇಗುಲವನ್ನು ಮತ್ತೆ ತೆಗೆಯಲಿದೆ.
ಇಂದು ನಡೆಯುವ ಮಂಡಲಪೂಜೆಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿದ್ದಾರೆ. ದೇಗುಲದಲ್ಲಿ ತಂಕ ಅಂಕಿ (ಚಿನ್ನದ ವಸ್ತ್ರ) ಅಲಂಕೃತ ಅಯ್ಯಪ್ಪನ ದರ್ಶನಕ್ಕೆ ನಿನ್ನೆಯಿಂದಲೇ ಭಕ್ತರು ಸಾಲುಗಟ್ಟಿ ನಿಂತಿದ್ದು, ನೂಕುನುಗ್ಗಲು ಉಂಟಾಗಿತ್ತು. ದರ್ಶನಕ್ಕಾಗಿ ಅಪಾಚೆಮೇಡುವರೆಗೆ ಸರತಿ ಸಾಲು ಇದೆ. ಪವಿತ್ರ ಇರುಮುಡಿ ಮೂಟೆಯನ್ನು ತಲೆಯ ಮೇಲೆ ಹೊತ್ತುಕೊಂಡು ಸ್ವಾಮಿಯೇ ಶರಣಂ ಅಯ್ಯಪ್ಪ ಎಂಬ ಮಂತ್ರಗಳನ್ನು ಪಠಿಸುತ್ತಿರುವ ಭಕ್ತರ ಉದ್ದನೆಯ ಸರತಿ ಸಾಲುಗಳು ಸನ್ನಿಧಾನಂ, ದೇಗುಲದ ಸಮುಚ್ಚಯದಲ್ಲೂ ಕಾಣಬಹುದು.
41 ದಿನಗಳ ಯಾತ್ರೆ ಕೊನೆ:ವಾರ್ಷಿಕವಾಗಿ ಎರಡು ತಿಂಗಳ ಕಾಲ ನಡೆದ ಅಯ್ಯಪ್ಪ ಸ್ವಾಮಿಯ ಯಾತ್ರೆಯ ಮೊದಲ ಚರಣದಲ್ಲಿ ಮಂಡಲ ಪೂಜೆಯು ವಿಶಿಷ್ಟವಾಗಿದೆ. ಈ ವೇಳೆ ಅಯ್ಯಪ್ಪನ ದರ್ಶನ ಪಡೆಯಲು ಭಕ್ತ ಸಾಗರವೇ ಕಾಯುತ್ತದೆ. ಇಂದಿಗೆ 41 ದಿನಗಳ ಸುದೀರ್ಘ ತೀರ್ಥಯಾತ್ರೆ ಕೊನೆಗೊಳ್ಳಲಿದೆ. ರಾತ್ರಿ 11 ಗಂಟೆಗೆ ದೇಗುಲದ ಬಾಗಿಲುಗಳನ್ನು ಮುಚ್ಚಲಾಗುತ್ತದೆ.
ಪವಿತ್ರ ತಂಕ ಅಂಕಿ (ಚಿನ್ನದ ವಸ್ತ್ರ) ಧಾರಿತ ಅಯ್ಯಪ್ಪ ಸ್ವಾಮಿಯ ಮೆರವಣಿಗೆ ನಿನ್ನೆ ಸಂಜೆ ಇಲ್ಲಿನ ಬೆಟ್ಟದ ದೇಗುಲದಲ್ಲಿ ವಿಧ್ಯುಕ್ತವಾಗಿ ಜರುಗಿತು. ಅಯ್ಯಪ್ಪ ಸ್ವಾಮಿಯ ವಿಗ್ರಹದ ಮೇಲೆ ಚಿನ್ನದ ವಸ್ತ್ರವನ್ನು ಇಟ್ಟ ಬಳಿಕ ಮಂಡಲ ಪೂಜೆ ಆರಂಭಿಸಲಾಗುತ್ತದೆ. ಬುಧವಾರ ಬೆಳಗ್ಗೆ 10.30ರಿಂದ 11.30ರವರೆಗೆ ಪೂಜಾ ಕೈಂಕರ್ಯಗಳು ನೆರವೇರಿದವು.