ಕರ್ನಾಟಕ

karnataka

ETV Bharat / bharat

ಭಾರತದ ಮೊದಲ ಪುಂಗನೂರು ತಳಿಯ ಐವಿಎಫ್ ಕರು ಜನನ

ಮಹಾರಾಷ್ಟ್ರದ ಅಹ್ಮದ್‌ನಗರದ ರೈತರೊಬ್ಬರ ಮನೆಯಲ್ಲಿ ಐವಿಎಫ್‌ ತಂತ್ರಜ್ಞಾನದಡಿ ಗರ್ಭ ಧರಿಸಿದ್ದ ಪುಂಗನೂರು ಜಾನುವಾರು ತಳಿ ಹಸು ಕರುವಿಗೆ ಜನ್ಮ ನೀಡಿದೆ.

ಪುಂಗನೂರು ತಳಿಯ ಐವಿಎಫ್ ಕರು
ಪುಂಗನೂರು ತಳಿಯ ಐವಿಎಫ್ ಕರು

By

Published : Jan 9, 2022, 7:26 AM IST

ನವದೆಹಲಿ: ವಿಶ್ವದಲ್ಲೇ ಅತ್ಯಂತ ಕುಳ್ಳಗಿರುವ ಜಾನುವಾರುಗಳ ಪೈಕಿ ಪುಂಗನೂರು ತಳಿ ಕೂಡ ಒಂದು. ದೇಶದಲ್ಲಿ ಈ ತಳಿಯ 500ಕ್ಕೂ ಕಡಿಮೆ ಹಸುಗಳಿವೆ. 2022ರ ಹೊಸ ವರ್ಷ ಪುಂಗನೂರು ತಳಿಗೆ ಮೆರುಗು ತಂದಿದ್ದು, ಶನಿವಾರ ಇದೇ ತಳಿಯ ಮೊದಲ ಐವಿಎಫ್ ಕರು ಜನಿಸಿದೆ ಎಂದು ಪಶು ಸಂಗೋಪನಾ ಇಲಾಖೆ ಮಾಹಿತಿ ನೀಡಿದೆ.

ಭಾರತದಲ್ಲಿ ಪುಂಗನೂರು ಜಾನುವಾರು ತಳಿಯ ಮೊದಲ ಇನ್‌ವಿಟ್ರೋ ಫ‌ರ್ಟಿಲೈಸೇಷನ್‌ (ಐವಿಎಫ್) ಕರು ಮಹಾರಾಷ್ಟ್ರದ ಅಹ್ಮದ್‌ನಗರದಲ್ಲಿ ಜನಿಸಿದೆ ಎಂದು ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ ತಿಳಿಸಿದೆ.

ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಅಡಿಯಲ್ಲಿ ಸ್ಥಳೀಯ ಜಾನುವಾರುಗಳನ್ನು ಸಂರಕ್ಷಿಸುವ ಉದ್ದೇಶದಿಂದ ಹಾಗೂ ಹಾಲು ಉತ್ಪಾದನೆಗೆ ಉತ್ತೇಜನ ನೀಡುವ ಹಿನ್ನೆಲೆಯಲ್ಲಿ ಅನೇಕ ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ಕಳೆದ ಹಲವು ದಶಕಗಳಲ್ಲಿ ಭಾರತದ ಸ್ಥಳೀಯ ಜಾನುವಾರುಗಳ ಸಂಖ್ಯೆ ಕ್ಷೀಣಿಸಿದೆ. ಹೀಗಾಗಿ, ಇಲಾಖೆಯು ಸ್ಥಳೀಯ ಮತ್ತು ಅಪರೂಪದ ಗೋವುಗಳನ್ನು ಸಂರಕ್ಷಿಸಲು ಜಾನುವಾರುಗಳಿಗೆ ಐವಿಎಫ್ ಬಳಕೆಯನ್ನು ಉತ್ತೇಜಿಸುತ್ತಿದೆ.

ಬನ್ನಿ, ತಾರ್ಪಾಕರ್ ಮತ್ತು ಒಂಗೋಲ್ ತಳಿಗಳಿಗೂ ಐವಿಎಫ್ ವೈಜ್ಞಾನಿಕ ಕ್ರಿಯೆ ಮೂಲಕ ಅಂದರೆ ಕೃತಕ ಗರ್ಭಧಾರಣೆ ಮೂಲಕ ಕರುಗಳು ಜನಿಸಿವೆ. ಅಕ್ಟೋಬರ್‌ನಲ್ಲಿ ಭಾರತದ ಮೊದಲ 'ಬನ್ನಿ' ಎಮ್ಮೆ ತಳಿಯ ಐವಿಎಫ್ ಕರು ಗುಜರಾತ್‌ನ ಸೋಮನಾಥ್ ಜಿಲ್ಲೆಯಲ್ಲಿ ಜನಿಸಿದರೆ, ರಾಜಸ್ಥಾನದ ಸೂರತ್‌ಗಢದಲ್ಲಿ ಐವಿಎಫ್ ತಂತ್ರಜ್ಞಾನದ ಮೂಲಕ ಗರ್ಭಧರಿಸಿದ 'ತಾರ್ಪಾಕರ್' ತಳಿಯ ಮೊದಲ ಹೆಣ್ಣು ಕರು ಜನನವಾಗಿದೆ.

ಪುಂಗನೂರು ತಳಿಯ ಹಸುಗಳ ವಿಶೇಷತೆ:

ಆಂಧ್ರಪ್ರದೇಶ ಮೂಲದ ಪುಂಗನೂರು ತಳಿಯ ಹಸುಗಳು ಗಾತ್ರದಲ್ಲಿ ಕುಳ್ಳಗೆ, ಮೈತುಂಬಿಕೊಂಡ ಗುಂಡಗುಂಡಗಿನ ಆಕಾರ, ಮುದ್ದಾದ ಮುಖದೊಂದಿಗೆ ಅಷ್ಟೇ ಮುದ್ದಾದ ಸೌಮ್ಯ ಸ್ವಭಾವ ಹೊಂದಿವೆ. ಇಷ್ಟೊಂದು ಸುಂದರವಾಗಿರುವ ಹಸುವಿನ ತಳಿ ಜಗತ್ತಿನ ಬೇರೆಲ್ಲೂ ಇಲ್ಲ ಎಂಬುದು ದೇಶದ ನಾನಾ ಭಾಗದ ರೈತರು ಹಾಗೂ ಪಶು ಸಂಗೋಪನಾ ವಲಯದ ಪರಿಣಿತರ ಅಭಿಪ್ರಾಯ. ಪಕ್ಕದ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪುಂಗನೂರು ಗ್ರಾಮ ಈ ಹಸುಗಳ ಮೂಲ ಸ್ಥಾನ. ಹೀಗಾಗಿಯೇ ಹಸುಗಳ ತಳಿಗೆ ಗ್ರಾಮದ ಹೆಸರೇ ಬಂದಿದೆ ಎನ್ನಲಾಗಿದೆ.

ಇದನ್ನೂ ಓದಿ:ಉದ್ಯೋಗದ ಹೆಸರಲ್ಲಿ ಅಮಾಯಕರನ್ನು ವಂಚಿಸುತ್ತಿದ್ದ ಗ್ಯಾಂಗ್ ಸದೆಬಡಿದ ಹೈದರಾಬಾದ್ ಪೊಲೀಸ್

ABOUT THE AUTHOR

...view details