ಲಖನೌ (ಉತ್ತರ ಪ್ರದೇಶ) :ಲಖನೌದಠಾಕುರ್‌ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಬೆಗಾರಿಯಾ ಗ್ರಾಮದಲ್ಲಿರುವ ಕೇಂದ್ರ ಸಚಿವ ಕೌಶಲ್ ಕಿಶೋರ್ ಪುತ್ರನ ಮನೆಯಲ್ಲಿ ನಡೆದಿದ್ದ ವಿನಯ್ ಶ್ರೀವಾಸ್ತವ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳ ವಿಚಾರಣೆ ವೇಳೆ ಹಲವು ಸಂಗತಿಗಳು ಬೆಳಕಿಗೆ ಬಂದಿವೆ. ಆರೋಪಿ ಅಂಕಿತ್, ವಿಕಾಸ್ ಕಿಶೋರ್ನ ಪಿಸ್ತೂಲ್ ನಿಂದ ವಿನಯ್ ಶ್ರೀವಾಸ್ತವ್ನ ಹಣೆಗೆ ಗುರಿಯಿಟ್ಟು ಗುಂಡು ಹಾರಿಸಿರುವುದಾಗಿ ತಿಳಿದು ಬಂದಿದೆ. ವಿನಯ್ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಸಹ ಆತನ ತಲೆಯ ಮೂಲಕ ಗುಂಡು ಹಾದು ಹೋಗಿರುವುದು ದೃಢಪಟ್ಟಿದೆ.
ಪೊಲೀಸರು ನೀಡಿದ ಮಾಹಿತಿ ಪ್ರಕಾರ, ವಿಕಾಸ್ ಕಿಶೋರ್ ಮನೆಯಲ್ಲಿದ್ದ ಸ್ನೇಹಿತರೆಲ್ಲರೂ ಮೊದಲು ಪಾರ್ಟಿ ಮಾಡಿದ್ದಾರೆ. ಈ ವೇಳೆ ಅಂಕಿತ್ ಮತ್ತು ವಿನಯ್ ನಡುವೆ ಜೂಜಾಟದ ವಿಚಾರವಾಗಿ ಜಗಳ ನಡೆದಿದೆ. ಬಳಿಕ ಮಾತಿಗೆ ಮಾತು ಬೆಳೆದಿದ್ದು, ಆರೋಪಿಗಳಿಂದ ವಿನಯ್ ತಪ್ಪಿಕೊಳ್ಳಲು ರೂಮ್ ಒಳಗೆ ಓಡಿ ಹೋಗಿದ್ದಾನೆ. ಆದರೆ ಅಲ್ಲಿಗೂ ಆರೋಪಿಗಳು ಬಂದಿದ್ದು, ಶಮಿ ಮತ್ತು ಅಜಯ್ ಎಂಬುವರು ವಿನಯ್ ಶ್ರೀವಾಸ್ತವ್ ಅವರ ಕೈಗಳನ್ನು ಹಿಡಿದುಕೊಂಡಿದ್ದಾರೆ. ಈ ವೇಳೆ ಅಂಕಿತ್ ಹಾಸಿಗೆಯಲ್ಲಿ ದಿಂಬಿನ ಕೆಳಗೆ ಇರಿಸಿದ್ದ ಪಿಸ್ತೂಲ್ ಅನ್ನು ಹೊರತೆಗೆದು ಆತನ ಹಣೆಗೆ ಗುಂಡು ಹಾರಿಸಿದ್ದಾನೆ. ಪರಿಣಾಮ ವಿನಯ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ :Bihar firing : ಕೋರ್ಟ್ ಆವರಣಕ್ಕೆ ನುಗ್ಗಿ ಕೈದಿಗಳ ಮೇಲೆ ಗುಂಡು ಹಾರಿಸಿದ ದುಷ್ಕರ್ಮಿಗಳು