ಕಾಠ್ಮಂಡು:ರಾಮಾಯಣ ಮಹಾಗ್ರಂಥದಲ್ಲಿ ಬರುವ ಭಾರತ ಹಾಗೂ ನೇಪಾಳ ದೇಶಗಳಲ್ಲಿನ ಸ್ಥಳಗಳನ್ನು ಸಂಪರ್ಕಿಸುವ ಭಾರತ್ ಗೌರವ್ ರೈಲಿನ ಸಂಚಾರ ಇಂದು ಆರಂಭವಾಗಿದ್ದು, 500 ಪ್ರಯಾಣಿಕರನ್ನು ಹೊತ್ತ ರೈಲು ಪ್ರಥಮ ಬಾರಿಗೆ ನೇಪಾಳದ ಜನಕಪುರ್ಗೆ ಆಗಮಿಸಿದೆ. 14 ಕೋಚುಗಳನ್ನು ಹೊಂದಿರುವ ರೈಲಿಗೆ ದೆಹಲಿಯ ಸಫ್ದರ್ ಜಂಗ್ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿಸಲಾಗಿತ್ತು.
ರಾಮಾಯಣ ಕಥಾ ಸ್ಥಳಗಳ ಮೂಲಕ ಸಂಚರಿಸುವ ಈ ರೈಲು ನೇಪಾಳದ ಧಾರ್ಮಿಕ ಕ್ಷೇತ್ರವಾದ ಜನಕಪುರವನ್ನು ಸಹ ಸಂಪರ್ಕಿಸುತ್ತದೆ. ರಾಮಾಯಣದ ಜನಪ್ರಿಯ ಧಾರ್ಮಿಕ ಕ್ಷೇತ್ರಗಳಾದ ಅಯೋಧ್ಯೆ, ನಂದಿಗ್ರಾಮ, ಸೀತಾಮರ್ಹುಯಿ, ವಾರಣಾಸಿ, ಪ್ರಯಾಗರಾಜ್, ಚಿತ್ರಕೂಟ, ಪಂಚವಟಿ (ನಾಸಿಕ), ಹಂಪಿ, ರಾಮೇಶ್ವರಮ್ ಮತ್ತು ಭದ್ರಾಚಲಂಗಳನ್ನು ಸಹ ಸಂಪರ್ಕಿಸುತ್ತದೆ.
ಮುಖ್ಯ ಮಂತ್ರಿ ಮಾಧೇಶ ಪ್ರದೇಶ ಲಾಲ್ಬಾಬು ರಾವುತ್, ಕಯಗಾರಿಕೆ ಮತ್ತು ಪ್ರವಾಸೋದ್ಯಮ ಸಚಿವ ಮಾಧೇಶ ಪ್ರದೇಶ ಶತ್ರುಘನ್ ಮಹತೊ, ಜನಕಪುಧಾಮ್ ಮೇಯರ್ ಮನೋಜ ಕುಮಾರ ಶಾ, ನೇಪಾಳ ರೈಲ್ವೇಸ್ನ ಜನರಲ್ ಮ್ಯಾನೇಜರ್ ನಿರಂಜನ್ ಝಾ, ಕಾಠ್ಮಂಡುನಲ್ಲಿರುವ ಭಾರತೀಯ ಎಂಬೆಸಿಯ ಕೌನ್ಸೆಲರ್ ಪ್ರಸನ್ನ ಶ್ರೀವಾಸ್ತವ ಎಲ್ಲರೂ ಸೇರಿ ನೇಪಾಳಕ್ಕೆ ಆಗಮಿಸಿದ ಭಾರತೀಯ ಪ್ರಯಾಣಿಕರಿಗೆ ಸ್ವಾಗತ ಕೋರಿದರು.
ಯಾತ್ರಾರ್ಥಿಗಳು ಜಾನಕಿ ದೇವಾಲಯದ ದರ್ಶನ ಮಾಡಲಿದ್ದಾರೆ ಹಾಗೂ ದೇವಸ್ಥಾನದ ಆವರಣದಲ್ಲಿ ಜರುಗಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಗಂಗಾ ಆರತಿಯಲ್ಲಿ ಭಾಗವಹಿಸಲಿದ್ದಾರೆ.
ಭಾರತ್ ಗೌರವ್ ಯಾತ್ರಾ ರೈಲಿನಿಂದ ಎರಡೂ ದೇಶಗಳ ಮಧ್ಯದ ಪ್ರವಾಸೋದ್ಯಮದ ಬೆಳವಣಿಗೆಗೆ ಮತ್ತಷ್ಟು ಒತ್ತು ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.