ಕಳಕೊಟ್ಟಂ :ಕೇರಳದ ಕಳಕೊಟ್ಟಂ ಸೈನಿಕ ಶಾಲೆ ಇದೇ ಮೊದಲ ಬಾರಿಗೆ ಬಾಲಕಿಯರ ಕೆಡೆಟ್‌ಗಳಿಗೆ ಅವಕಾಶ ನೀಡಿದೆ. 1962ರಲ್ಲಿ ಈ ಶಾಲೆ ಆರಂಭವಾಗಿತ್ತು. ಅಂದಿನಿಂದ ಮಹಿಳಾ ಕೆಡೆಟ್‌ಗಳಿಗೆ ಅವಕಾಶ ನೀಡಿರಲಿಲ್ಲ.
2021-22ರ ಶೈಕ್ಷಣಿಕ ವರ್ಷದ ಅಖಿಲ ಭಾರತ ಸೈನಿಕ ಶಾಲೆಯ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಹುಡುಗಿಯರ ಮೊದಲ ಬ್ಯಾಚ್ ಇದೀಗ ಶಾಲೆಯಲ್ಲಿ ಸೇರಲು ನೋಂದಣಿ ಮಾಡಿಕೊಂಡಿವೆ.
ಸೈನಿಕ ಶಾಲಾ ಸಭಾಂಗಣದಲ್ಲಿ ವಿಶೇಷ ಸಭೆಯನ್ನು ನಡೆಸಲಾಗಿದೆ. ಕೇರಳದ ಏಳು ಮಂದಿ, ಬಿಹಾರದಿಂದ ಇಬ್ಬರು, ಉತ್ತರಪ್ರದೇಶದ ಒಬ್ಬರನ್ನು ಕಳಕೊಟ್ಟಂ ಸೈನಿಕ ಶಾಲೆಯ ಕುಟುಂಬಕ್ಕೆ ಸ್ವಾಗತಿಸಲಾಗಿದೆ.
ಕೆಡೆಟ್‌ಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಾಂಶುಪಾಲ ಕರ್ನಲ್ ಧೀರೇಂದ್ರ ಕುಮಾರ್, ಸೈನಿಕ ಶಾಲೆಯಲ್ಲಿ ವಾಸ್ತವ್ಯ ಮಾಡುತ್ತಿರುವ ಬಾಲಕಿಯರಿಗೆ ಶುಭ ಹಾರೈಸಿದರು. ಬಾಲಕಿಯರಿಗೆ ಅವಕಾಶ ಕಲ್ಪಿಸಿರುವ ಹಿನ್ನೆಲೆ ಶಾಲೆಯಲ್ಲಿ ಮೂಲಸೌಕರ್ಯಗಳಲ್ಲಿ ಭಾರಿ ಬದಲಾವಣೆಗಳನ್ನು ಮಾಡಲಾಗಿದೆ. ಶೈಕ್ಷಣಿಕ ವರ್ಷದ ಆರಂಭದ ವೇಳೆಗೆ ಹೊಸ ಮನೆ ಮತ್ತು ವಸತಿ ನಿಲಯದ ನಿರ್ಮಾಣ ಪೂರ್ಣಗೊಂಡಿದೆ.
ಮಿಜೋರಾಂನ ಸೈನಿಕ ಸ್ಕೂಲ್ ಸೊಸೈಟಿ 2018-19ರ ಶೈಕ್ಷಣಿಕ ವರ್ಷದಲ್ಲಿ ಬಾಲಕಿಯರ ಕೆಡೆಟ್‌ಗಳಿಗೆ ಪ್ರವೇಶ ನೀಡಲು ಆರಂಭಿಸಿತು. ಇದಾದ ಬಳಿಕ ಇತರ ರಾಜ್ಯಗಳು ತಮ್ಮ ಸೈನಿಕ ಶಾಲೆಗಳಿಗೆ ಹೆಣ್ಣುಮಕ್ಕಳನ್ನು ಸೇರಿಸಿಕೊಳ್ಳುವುದನ್ನು ಅನುಸರಿಸುತ್ತಿವೆ. ಮಹಿಳಾ ಸಬಲೀಕರಣವನ್ನು ಸೂಕ್ತವಾಗಿ ಜಾರಿ ಮಾಡುವ ಪ್ರಯತ್ನದಲ್ಲಿ ಸಶಸ್ತ್ರ ಪಡೆಗಳಲ್ಲಿ ಯುವತಿಯರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿಯವರು ತಮ್ಮ 75ನೇ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಎಲ್ಲಾ 33 ಸೈನಿಕ ಶಾಲೆಗಳು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಬಾಲಕಿಯರ ಕೆಡೆಟ್‌ಗಳನ್ನು ಸೇರಿಸಿಕೊಳ್ಳುವುದನ್ನು ಖಚಿತಪಡಿಸಿವೆ ಎಂದು ಘೋಷಿಸಿದ್ದರು. ಅದರಂತೆ, ಪ್ರತಿ ವರ್ಷದ ಪ್ರವೇಶದ ಒಟ್ಟು ಸೀಟುಗಳಲ್ಲಿ 10 ಪ್ರತಿಶತವನ್ನು ದೇಶದ ಪ್ರತಿ ಸೈನಿಕ ಶಾಲೆಯಲ್ಲಿ ಬಾಲಕಿಯರಿಗೆ ಮೀಸಲಿಡಲಾಗುತ್ತಿದೆ.