ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯ ಮತ್ತೊಂದು ನ್ಯಾಯಾಲಯದಲ್ಲಿ ಗುಂಡಿನ ಸದ್ದು ಕೇಳಿದೆ. ಇಲ್ಲಿನ ತೀಸ್ ಹಜಾರಿ ನ್ಯಾಯಾಲಯದ ಆವರಣದಲ್ಲಿ ಬುಧವಾರ ಗುಂಡು ಹಾರಿಸಲಾಗಿದ್ದು, ಎರಡು ಗುಂಪಿನ ವಕೀಲರು ಈ ಗುಂಡಿನ ದಾಳಿಯಲ್ಲಿ ಭಾಗಿಯಾಗಿದ್ದಾರೆ. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿಯ ಸಬ್ಜಿ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ತೀಸ್ ಹಜಾರಿ ನ್ಯಾಯಾಲಯದಲ್ಲಿ ಇಂದು ಮಧ್ಯಾಹ್ನ 1:35 ರ ಸುಮಾರಿಗೆ ಗುಂಡಿನ ದಾಳಿ ನಡೆದಿದೆ. ಎರಡು ಗುಂಪುಗಳ ವಕೀಲರ ನಡುವೆ ನಡೆದ ತೀವ್ರ ವಾಗ್ವಾದದ ನಂತರ ಈ ಗುಂಡಿನ ದಾಳಿ ನಡೆಸಲಾಗಿದೆ ಎಂದು ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತ ಸಾಗರ್ ಸಿಂಗ್ ಕಲ್ಸಿ ಹೇಳಿದ್ದಾರೆ.
ಆರಂಭದಲ್ಲಿ ವಕೀಲರ ಎರಡು ಗುಂಪುಗಳ ನಡುವೆ ಗಲಾಟೆ ಉಂಟಾಗಿದೆ. ಜಗಳದಿಂದಾಗಿ ಪದಾಧಿಕಾರಿಗಳು ಸೇರಿದಂತೆ ಎರಡು ವಿಭಿನ್ನ ಗುಂಪಿನ ವಕೀಲರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಈ ಘಟನೆ ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಇದರಲ್ಲಿ ಯಾರಿಗೂ ಗಾಯವಾಗಿಲ್ಲ. ಪರಿಸ್ಥಿತಿ ಸಹಜವಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ರೋಹಿಣಿ ಕೋರ್ಟ್ನಲ್ಲಿ ಮತ್ತೆ ಗುಂಡಿನ ಸದ್ದು.. ವಕೀಲರ ಮೇಲೆ ಗುಂಡು ಹಾರಿಸಿದ ತಪಸಣಾ ಅಧಿಕಾರಿ!
ತೀಸ್ ಹಜಾರಿ ಕೋರ್ಟ್ ಆವರಣದಲ್ಲಿ ನಡೆದ ಗುಂಡಿನ ದಾಳಿಯನ್ನು ದೆಹಲಿ ಬಾರ್ ಕೌನ್ಸಿಲ್ ಖಂಡಿಸಿದೆ. ಈ ಬಗ್ಗೆ ಮಾತನಾಡಿದ ಬಾರ್ ಕೌನ್ಸಿಲ್ ಅಧ್ಯಕ್ಷ ಕೆ.ಕೆ. ಮನನ್, ವಕೀಲರು ಬಳಿಸಿದ ಗನ್ಗಳಿಗೆ ಪರವಾನಗಿ ನೀಡಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಯಲು ಸಂಪೂರ್ಣ ತನಿಖೆ ನಡೆಸಲಾಗುವುದು ಎಂದು ಹೇಳಿದರು. ಇಡೀ ಘಟನೆ ಬಗ್ಗೆ ವಿವರವಾದ ವಿಚಾರಣೆಯನ್ನು ಕೈಗೊಳ್ಳಲಾಗುವುದು. ಗನ್ಗಳ ಪರವಾನಗಿ ಪಡೆದಿದ್ದರೂ ಸಹ ಯಾವುದೇ ವಕೀಲರು ಅಥವಾ ಬೇರೆ ಯಾರೂ ಅವುಗಳನ್ನು ನ್ಯಾಯಾಲಯದ ಆವರಣದ ಒಳಗೆ ಅಥವಾ ಸುತ್ತಮುತ್ತ ಈ ರೀತಿ ಬಳಸುವಂತಿಲ್ಲ ಎಂದು ತಿಳಿಸಿದರು.
ಲೈಸೆನ್ಸ್ ಅಮಾನತು:ಮತ್ತೊಂದೆಡೆ, ಗುಂಡಿನ ದಾಳಿ ನಡೆಸಿದ ಆರೋಪಿ ವಕೀಲನನ್ನು ಮನೀಶ್ ಶರ್ಮಾ ಗುರುತಿಸಲಾಗಿದೆ. ವಕೀಲನಾಗಿ ಅಭ್ಯಾಸ ಮಾಡಲು ಇರುವ ಲೈಸೆನ್ಸ್ ಅನ್ನು ಬಾರ್ ಕೌನ್ಸಿಲ್ ಅಮಾನತುಗೊಳಿಸಿದೆ. ವಕೀಲರಾಗಿರುವ ನೀವು (ಮನೀಶ್ ಶರ್ಮಾ) ನ್ಯಾಯಾಲಯದ ಆವರಣದೊಳಗೆ ಹಿಂಸಾಚಾರಕ್ಕೆ ಯತ್ನಿಸಿದ್ದು ಅತ್ಯಂತ ಶೋಚನೀಯ. ಇದು ಘೋರ ದುರ್ನಡತೆಯಾಗಿದೆ. ತಕ್ಷಣವೇ ಜಾರಿಗೆ ಬರುವಂತೆ ಲೈಸೆನ್ಸ್ ಅಮಾನತುಗೊಳಿಸಿದೆ ಎಂದು ಕಾರ್ಯದರ್ಶಿ ಅರುಣ್ ಶರ್ಮಾ ತಿಳಿಸಿದ್ದಾರೆ.
ಇದೇ ಏಪ್ರಿಲ್‌ನಲ್ಲಿ ದೆಹಲಿಯ ಸಾಕೇತ್ ನ್ಯಾಯಾಲಯದ ಆವರಣದಲ್ಲೂ ಗುಂಡಿನ ದಾಳಿ ಘಟನೆ ನಡೆದಿತ್ತು. ಮಹಿಳೆ ಮೇಲೆ ಕಾಮೇಶ್ವರ್ ಸಿಂಗ್ ಎಂಬ ವ್ಯಕ್ತಿ ಗುಂಡು ಹಾರಿಸಿದ್ದ. ನಂತರ ದೆಹಲಿ ಅಪರಾಧ ವಿಭಾಗದ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಈ ಘಟನೆಯ ಸಂತ್ರಸ್ತೆಯ ಪರ ವಕೀಲರು, ತಮ್ಮ ಕಕ್ಷಿದಾರರಿಗೆ ಆರೋಪಿಗಳಿಂದ ಕೊಲೆ ಬೆದರಿಕೆಗಳು ಬರುತ್ತಿವೆ ಎಂದು ಆರೋಪಿಸಿದ್ದರು.
ಇದನ್ನೂ ಓದಿ:ಕೋರ್ಟ್ನಲ್ಲಿ ವಕೀಲರ ಸೋಗಿನಲ್ಲಿದ್ದ ದುಷ್ಕರ್ಮಿಯಿಂದ ಫೈರಿಂಗ್: ಮಹಿಳೆಗೆ ಗುಂಡೇಟು