ನಳಂದಾ (ಬಿಹಾರ): ಬಿಹಾರದಲ್ಲಿ ಹಿಂಸಾಚಾರ ಮುಂದುವರಿದಿದೆ. ಇಂದು ಮತ್ತೆರಡು ಕಡೆ ಹಿಂಸಾಚಾರ ಉಂಟಾಗಿ ಮೂವರು ಗಾಯಗೊಂಡಿದ್ದಾರೆ. ರಾಮನವಮಿಯಂದು ಹಿಂಸಾಚಾರ ನಡೆದ ಬೆನ್ನಲ್ಲೇ ಇಂದು ಕೂಡ ನಳಂದಾ ವ್ಯಾಪ್ತಿಯಲ್ಲಿ ಎರಡು ಕಡೆ ಹಿಂಸಾಚಾರ ನಡೆದಿದೆ. ಇಲ್ಲಿನ ಪಹರಪುರ ಎಂಬಲ್ಲಿ ಗುಂಡಿನ ದಾಳಿ ನಡೆದಿದ್ದು, ಇದರಲ್ಲಿ ಇಬ್ಬರಿಗೆ ಗಂಭೀರ ಗಾಯವಾಗಿದೆ. ಗಾಯಾಳುಗಳನ್ನು ಇಲ್ಲಿನ ಷರೀಫ್ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೆ ಬನೌಲಿಯಾದಲ್ಲಿ ನಡೆದ ಹಿಂಸಾಚಾರದಲ್ಲಿ ಒಬ್ಬ ಪೊಲೀಸ್ ಪೇದೆಗೆ ಗಂಭೀರ ಗಾಯವಾಗಿದೆ ಎಂದು ವರದಿಯಾಗಿದೆ.
ರಾಮನವಮಿಯಂದು ಇಲ್ಲಿನ ಸಸಾರಾಮ್ ಮತ್ತು ನಳಂದಾ ಪಟ್ಟಣದಲ್ಲಿ ಹಿಂಸಾಚಾರ ನಡೆದಿತ್ತು. ಗುರುವಾರ ಆರಂಭಗೊಂಡಿದ್ದ ಗಲಾಟೆ ಶುಕ್ರವಾರದ ವರೆಗೂ ಮುಂದುವರೆದಿತ್ತು. ಇದೇ ವೇಳೆ ಕೆಲ ದುಷ್ಕರ್ಮಿಗಳು ಮನೆಗಳಿಗೆ ನುಗ್ಗಿ ಲೂಟಿ ಮಾಡಿದ್ದರು. ಅಲ್ಲದೆ ವಾಹನಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದರು. ಈ ಸಂಬಂಧ 45 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಜೊತೆಗೆ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು 48 ಗಂಟೆಗಳ ಕಾಲ ಇಂಟರ್ನೆಟ್ ಸ್ಥಗಿತಗೊಳಿಸಲಾಗಿತ್ತು. ಅಲ್ಲದೆ ಸೆಕ್ಷನ್ 144 ಜಾರಿಗೊಳಿಸಲಾಗಿತ್ತು.
ಈ ಬೆನ್ನಲ್ಲೇ ಇಂದು ಕೆಲವೆಡೆ ಹಿಂಸಾಚಾರ ನಡೆದಿದ್ದು, ಈ ಸಂಬಂಧ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಕ್ರಮವಹಿಸಿದ್ದಾರೆ. ಅಲ್ಲದೆ ಶಾಂತಿ ಕಾಪಾಡುವಂತೆ ಪೊಲೀಸರು ಜನರಲ್ಲಿ ಮನವಿ ಮಾಡಿದ್ದಾರೆ. ಸ್ಥಳಕ್ಕೆ ಡಿಸಿ ಮತ್ತು ಎಸ್ಪಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.