ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯ ಸಾಕೇತ್ ನ್ಯಾಯಾಲಯದಲ್ಲಿ ಶುಕ್ರವಾರ ಬೆಳಗ್ಗೆ ಗುಂಡಿನ ದಾಳಿ ನಡೆದಿದೆ. ದುಷ್ಕರ್ಮಿಯೊಬ್ಬ ಏಕಾಏಕಿ ಗುಂಡು ಹಾರಿಸಿದ್ದು, ಮಹಿಳೆಯೊಬ್ಬರು ಗುಂಡೇಟಿನಿಂದ ಗಾಯಗೊಂಡಿದ್ದಾನೆ. ಸಂತ್ರಸ್ತ ಮಹಿಳೆ ಮತ್ತು ಆರೋಪಿ ನಡುವೆ ಹಣದ ವಿಷಯವಾಗಿ ವಿವಾದ ಇತ್ತು. ಇದೇ ಕಾರಣಕ್ಕಾಗಿ ಫೈರಿಂಗ್ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಕೋರ್ಟ್‌ನಲ್ಲಿ ದುಷ್ಕರ್ಮಿ ಮೂರರಿಂದ ನಾಲ್ಕು ಸುತ್ತು ಗುಂಡು ಹಾರಿಸಿದ್ದಾರೆ. ಹೊಟ್ಟೆಗೆ ಗುಂಡೇಟು ತಾಗಿದ ಪರಿಣಾಮ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ. ಘಟನೆಯ ವಿಷಯ ತಿಳಿದು ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು, ಗಾಯಾಳು ಮಹಿಳೆಯನ್ನು ಏಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.
ನ್ಯಾಯಾಲಯದ ಸಂಕೀರ್ಣದಲ್ಲಿರುವ ವಕೀಲರ ಬ್ಲಾಕ್‌ನಲ್ಲಿ ಮಹಿಳೆ ಇದ್ದರು. ಆಗ ಮಹಿಳೆ ಮೇಲೆ ಗುಂಡು ಹಾರಿಸಿದ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಸದ್ಯ ಈ ದುಷ್ಕರ್ಮಿಯನ್ನು ಪೊಲೀಸರು ಗುರುತ್ತಿದ್ದು, ಆತನ ಪತ್ತೆಗಾಗಿ ಸಿಸಿಟಿವಿ ಕ್ಯಾಮೆರಾಗಳ ಪರಿಶೀಲನೆ ನಡೆಸಿದ್ದಾರೆ. ಮತ್ತೊಂದೆಡೆ, ಮೆಟಲ್ ಡಿಟೆಕ್ಟರ್‌ಗಳು ಮತ್ತು ಭದ್ರತಾ ಅಧಿಕಾರಿಗಳ ತಪಾಸಣೆಯ ಹೊರತಾಗಿಯೂ ದಾಳಿಕೋರ ಗನ್ನೊಂದಿಗೆ ನ್ಯಾಯಾಲಯದ ಆವರಣಕ್ಕೆ ಹೇಗೆ ಪ್ರವೇಶಿಸಿದ ಎಂಬ ಪ್ರಶ್ನೆ ಉದ್ಭವಿಸಿದೆ. ಈ ಬಗ್ಗೆ ಕುರಿತು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಕೇಜ್ರಿವಾಲ್ ಟ್ವೀಟ್:ಈ ಘಟನೆಬಗ್ಗೆದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದು, "ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಬೇರೆಯವರ ಕೆಲಸದಲ್ಲಿ ಅಡೆತಡೆಗಳನ್ನು ಸೃಷ್ಟಿಸುವ ಮತ್ತು ಪ್ರತಿಯೊಂದು ವಿಷಯದಲ್ಲೂ ಕೊಳಕು ರಾಜಕಾರಣ ಮಾಡುವ ಬದಲು ಪ್ರತಿಯೊಬ್ಬರೂ ತಮ್ಮ ಸ್ವಂತ ಕೆಲಸದತ್ತ ಗಮನಹರಿಸಬೇಕು. ತಮ್ಮ ಕಾರ್ಯ ನಿರ್ವಹಿಸಲು ಸಾಧ್ಯವಾಗದಿದ್ದರೆ, ಅಂತವರು ರಾಜೀನಾಮೆ ನೀಡಬೇಕು. ಜನರ ಸುರಕ್ಷತೆಯನ್ನು ರಾಮನ ವಿಶ್ವಾಸಕ್ಕೆ ಬಿಡಲು ಸಾಧ್ಯವಿಲ್ಲ'' ಎಂದು ಪರೋಕ್ಷವಾಗಿ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದಾರೆ.