ಧನ್ಬಾದ್(ಜಾರ್ಖಂಡ್):ಇಲ್ಲಿನ ಎಕ್ಸ್‌ಚೇಂಜ್ ರಸ್ತೆಯಲ್ಲಿರುವ ಹಾಜ್ರಾ ಆಸ್ಪತ್ರೆಯಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡು, ವೈದ್ಯ ದಂಪತಿ ಸೇರಿದಂತೆ ಐವರು ಉಸಿರುಗಟ್ಟಿ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ಇನ್ನೊಬ್ಬರು ತೀವ್ರ ಅಸ್ವಸ್ಥರಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಆಸ್ಪತ್ರೆಯಲ್ಲಿ ಸಿಕ್ಕಿಹಾಕಿಕೊಂಡಿದ್ದ ರೋಗಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.
ಹಾಜ್ರಾ ಆಸ್ಪತ್ರೆಗೆ ಹೊಂದಿಕೊಂಡಂತೆ ವೈದ್ಯ ದಂಪತಿ ವಾಸಿಸುತ್ತಿದ್ದರು. ಆಸ್ಪತ್ರೆ ಮತ್ತು ವೈದ್ಯರ ಮನೆ ಮಧ್ಯೆ ಚಿಕ್ಕದಾದ ದಾರಿ ಇದೆ. ಆಸ್ಪತ್ರೆಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಇಡೀ ಆಸ್ಪತ್ರೆ ಹೊಗೆಯಿಂದ ತುಂಬಿಕೊಂಡಿತ್ತು. ಇದು ವೈದ್ಯ ದಂಪತಿ ಮನೆಗೂ ವ್ಯಾಪಿಸಿದೆ. ಈ ವೇಳೆ ವೈದ್ಯ ದಂಪತಿ, ಮನೆಯ ಕೆಲಸದಾಕೆ ಮತ್ತು ಇನ್ನಿಬ್ಬರು ದಟ್ಟ ಹೊಗೆಯಿಂದ ಹೊರಬರಲಾಗದೇ ಮನೆಯಲ್ಲೇ ಸಿಕ್ಕಿಕೊಂಡು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಮನೆಯಲ್ಲಿದ್ದ ಪ್ರೀತಿಯ ನಾಯಿಯೂ ಕೂಡ ಪ್ರಾಣ ಕಳೆದುಕೊಂಡಿದೆ.
ಆಸ್ಪತ್ರೆ ಮತ್ತು ವೈದ್ಯ ಮನೆಯ ನಡುವಿದ್ದ ದಾರಿಯನ್ನು ಬಂದ್ ಮಾಡಲಾಗಿತ್ತು. ಹೀಗಾಗಿ ಅವರು ಮನೆಯಿಂದ ಹೊರಬರಲಾಗಿಲ್ಲ. ಇದ್ದಕ್ಕಿದ್ದಂತೆ ಜೋರಾದ ಸದ್ದಿನೊಂದಿಗೆ ಬೆಂಕಿ ಹೊತ್ತಿಕೊಂಡಿತ್ತು. ಈ ವೇಳೆ ಆಸ್ಪತ್ರೆಯಲ್ಲಿ ವೈದ್ಯರು, ರೋಗಿಗಳು ಇದ್ದರು. ಬೆಂಕಿ ಕಾಣಿಸಿಕೊಂಡ ತಕ್ಷಣ ಎಲ್ಲರನ್ನೂ ಅಲ್ಲಿಂದ ಸ್ಥಳಾಂತರಿಸಲಾಗಿದೆ.
ಘಟನೆಯ ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. 8 ಅಗ್ನಿಶಾಮಕ ವಾಹನಗಳು ಬೆಂಕಿಯನ್ನು ನಂದಿಸಲು ಹರಸಾಹಪಟ್ಟಿದ್ದಾರೆ. ಎಲ್ಲಾ ರೋಗಿಗಳು ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.
ಮಧ್ಯಪ್ರದೇಶದಲ್ಲಿ ನಡೆದಿದ್ದ ದುರಂತ:ಇದಕ್ಕೂ ಮೊದಲು ಕೆಲ ದಿನಗಳ ಹಿಂದೆ ಮಧ್ಯಪ್ರದೇಶದ ಜಬಲ್ಪುರದಲ್ಲಿರುವ ನ್ಯೂ ಲೈಫ್ ಮಲ್ಟಿ ಸ್ಪೆಷಾಲಿಟಿ ಖಾಸಗಿ ಆಸ್ಪತ್ರೆಯಲ್ಲಿ ಭಾರಿ ಅಗ್ನಿ ಅನಾಹುತ ಸಂಭವಿಸಿ, ದುರಂತದಲ್ಲಿ 10 ಮಂದಿ ಸಾವನ್ನಪ್ಪಿದ್ದರು. ಅನೇಕರು ಗಂಭೀರವಾಗಿ ಗಾಯಗೊಂಡಿದ್ದರು.