ಭದೋಹಿ(ಉತ್ತರಪ್ರದೇಶ):ದುರ್ಗಾದೇವಿಯ ಪೆಂಡಾಲ್ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಹೊತ್ತಿಕೊಂಡು 5 ಮಂದಿ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟು, 70 ಕ್ಕೂ ಅಧಿಕ ಭಕ್ತರು ಗಾಯಗೊಂಡ ಘಟನೆ ಉತ್ತರಪ್ರದೇಶದಲ್ಲಿ ಭಾನುವಾರ ರಾತ್ರಿ ನಡೆದಿದೆ.
ಭದೋಹಿ ಜಿಲ್ಲೆಯಲ್ಲಿ ದುರ್ಗಾ ದೇವಿ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ಭಾನುವಾರ ರಾತ್ರಿ ಆರತಿ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ 150 ಕ್ಕೂ ಅಧಿಕ ಜನರು ಪೆಂಡಾಲ್ನಲ್ಲಿ ದೇವಿಯ ದರ್ಶನ ಪಡೆಯುತ್ತಿದ್ದರು. ಇದ್ದಕ್ಕಿದ್ದಂತೆ ಶಾರ್ಟ್ ಸರ್ಕ್ಯೂಟ್ ಉಂಟಾಗಿದೆ.
ಈ ವೇಳೆ ಇಬ್ಬರು ಮಕ್ಕಳು ಸೇರಿದಂತೆ 5 ಭಕ್ತರು ವಿದ್ಯುತ್ ಪ್ರವಹಿಸಿ ಮತ್ತು ಬೆಂಕಿ ಹೊತ್ತಿಕೊಂಡು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. 70 ಅಧಿಕ ಜನರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.
ದೇವಿಯ ಪೆಂಡಾಲ್ಗೆ ಬೆಂಕಿ ಹೊತ್ತಿಕೊಂಡ ಮಾಹಿತಿ ತಿಳಿದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಗಾಯಾಳುಗಳ ರಕ್ಷಣೆಗೆ ಮುಂದಾದರು. ದೇವಿಯ ಪೆಂಡಾಲ್ನಲ್ಲಿ ನಡೆದ ದುರಂತ ಅಲ್ಲಿನ ಜನರಲ್ಲಿ ಆತಂಕ ಉಂಟು ಮಾಡಿದೆ.
ಓದಿ:ಉಗ್ರ ದಾಳಿ ಸಂಚು, ಪಾಕ್ ಜೊತೆ ನಂಟು ಹೊಂದಿದ್ದ ಮೂವರ ಬಂಧನ: 4 ಗ್ರೆನೇಡ್, ನಗದು ವಶ