ಮೊಹಾಲಿ (ಪಂಜಾಬ್):ಇಲ್ಲಿನ ರಾಸಾಯನಿಕ ಕಾರ್ಖಾನೆಯಲ್ಲಿ ಭೀಕರ ಬೆಂಕಿ ಅವಘಡ ಸಂಭವಿಸಿ, 8 ಮಂದಿ ತೀವ್ರ ಸುಟ್ಟ ಗಾಯಕ್ಕೀಡಾಗಿದ್ದಾರೆ. ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಖಾನೆಯಲ್ಲಿ ನಿರಂತರವಾಗಿ ಸ್ಫೋಟಗಳು ನಡೆಯುತ್ತಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.
ಮೊಹಾಲಿಯ ಕುರಲಿಯಲ್ಲಿರುವ ಕೆಮಿಕಲ್ ಫ್ಯಾಕ್ಟರಿ ಇದಾಗಿದ್ದು, ಬುಧವಾರ ಮಧ್ಯಾಹ್ನ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ 7 ರಿಂದ 8 ಮಂದಿಗೆ ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿದ್ದಾರೆ. ರಾಸಾಯನಿಕಕ್ಕೆ ಬೆಂಕಿ ತಾಗಿದ್ದರಿಂದ ಅಗ್ನಿಯ ನರ್ತನ ಹೆಚ್ಚಾಗಿದೆ. ವಿಷಯ ತಿಳಿದ ಅಗ್ನಿಶಾಮಕ ದಳ ವಾಹನಗಳು ಸ್ಥಳಕ್ಕೆ ತಲುಪಿದ್ದು, ನಂದಿಸುವ ಕಾರ್ಯ ನಡೆಸುತ್ತಿದ್ದಾರೆ. ಸ್ಥಳಕ್ಕೆ ಆಂಬ್ಯುಲೆನ್ಸ್ ಮತ್ತು ವೈದ್ಯರ ತಂಡವೂ ಆಗಮಿಸಿದೆ.
ಭೀಕರ ಬೆಂಕಿಯ ವಿಡಿಯೋ :ಬೆಂಕಿ ಹೊತ್ತಿಕೊಂಡು ರಾಸಾಯನಿಕ ಕಾರ್ಖಾನೆಯಿಂದ ಈವರೆಗೆ 5 ಮಂದಿಯನ್ನು ರಕ್ಷಿಸಲಾಗಿದೆ. ಗಾಯಗೊಂಡ 8 ಮಂದಿಯನ್ನು ಮೊಹಾಲಿಯ ಫೇಸ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಕಾರ್ಖಾನೆಯಲ್ಲಿ ಬೆಂಕಿ ತೀವ್ರತೆ ಎಷ್ಟಿದೆಯೆಂದರೆ ಅದರೊಳಗಿನ ರಾಸಾಯನಿಕದಿಂದಾಗಿ ನಿರಂತರವಾಗಿ ಸ್ಫೋಟಗಳು ಸಂಭವಿಸುತ್ತಿವೆ. ಇದರ ಎರಡು ವಿಡಿಯೋಗಳು ಕೂಡ ಹೊರಬಿದ್ದಿವೆ. ಮೊದಲ ವಿಡಿಯೋವನ್ನು ಹತ್ತಿರದಿಂದ ಚಿತ್ರೀಕರಿಸಲಾಗಿದೆ. ಅಗ್ನಿ ಜ್ವಾಲೆಗಳು ಮೇಲಕ್ಕೆ ಚಿಮ್ಮುತ್ತಿರುವುದು ನೋಡಬಹುದಾಗಿದೆ.