ಕೋಲ್ಕತ್ತಾ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾದಲ್ಲಿರುವ ನೇತಾಜಿ ಸುಭಾಶ್ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತಾ ಕೌಂಟರ್ ಬಳಿ ಇಂದು ರಾತ್ರಿ ಭಾರಿ ಬೆಂಕಿ ಅನಾಹುತ ಸಂಭವಿಸಿತು. ಅಗ್ನಿಶಾಮಕ ದಳದ ಸಿಬ್ಬಂದಿ ಎರಡು ವಾಹನಗಳಲ್ಲಿ ಸ್ಥಳಕ್ಕೆ ದೌಡಾಯಿಸಿ, ಬೆಂಕಿ ನಂದಿಸುವ ಕಾರ್ಯಾಚರಣೆ ಕೈಗೊಂಡರು. ಸದ್ಯದ ಮಾಹಿತಿ ಪ್ರಕಾರ, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಘಟನೆಯ ಸಂಪೂರ್ಣ ವಿವರ: ದೇಶೀಯ ಟರ್ಮಿನಲ್‌ನಲ್ಲಿ ಗೇಟ್ 3ಎ ಒಂದು ಬದಿಯಲ್ಲಿ ಇಂದು ರಾತ್ರಿ 9:20ರ ಸುಮಾರಿಗೆ ಇದ್ದಕ್ಕಿದ್ದಂತೆ ಹೊಗೆ ಕಾಣಿಸಿಕೊಂಡಿತು. ಇದರಿಂದ ಪ್ರಯಾಣಿಕರಲ್ಲಿ ಭೀತಿ ಆವರಿಸಿತು. ಇದರ ಬೆನ್ನಲ್ಲೇ ಬೆಂಕಿಯ ಜ್ವಾಲೆ ಹೆಚ್ಚಿತು. ಕೂಡಲೇ ವಿಮಾನ ನಿಲ್ದಾಣದ ಭದ್ರತೆಯ ಹೊಣೆ ಹೊತ್ತಿದ್ದ ಸಿಐಎಸ್‌ಎಫ್ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸಿದರು. ಆದರೆ, ಜ್ವಾಲೆ ಕ್ರಮೇಣ ಹೆಚ್ಚಾಗುತ್ತಿದ್ದಂತೆ ಅಗ್ನಿಶಾಮಕ ದಳ ಆಗಮಿಸಿ, ಬೆಂಕಿಯನ್ನು ಹತೋಟಿಗೆ ತರಲು ಹರಸಾಹಸಪಟ್ಟರು.
ಸದ್ಯ ವಿಮಾನ ನಿಲ್ದಾಣದೊಳಗಿದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಶಾರ್ಟ್ ಶರ್ಕ್ಯೂಟ್ನಿಂದ ಅವಘಡ ಉಂಟಾಗಿರುವ ಶಂಕೆ ವ್ಯಕ್ತವಾಗಿದೆ. ಸೆಂಟ್ರಲ್ ಎಸಿ ಸ್ಥಗಿತಗೊಳಿಸಲಾಗಿತ್ತು. ಪ್ರಯಾಣಿಕರ ಸುರಕ್ಷತೆಗಾಗಿ ಹಲವಾರು ಗೇಟ್‌ಗಳನ್ನು ಮುಚ್ಚಲಾಗಿದೆ. ಪೊಲೀಸ್ ಕಮಿಷನರ್ ಸೇರಿ ಹಲವರು ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.